ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಪರೇಡ್ ಗೆ ಪ್ರತಿ ವರ್ಷ ಎಲ್ಲಾ ರಾಜ್ಯಗಳ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳು ಟ್ಯಾಬ್ಲೋ ಪರಿಕಲ್ಪನೆಯನ್ನು ಕಳುಹಿಸುತ್ತವೆ. ಆಯ್ಕೆ ಸಮಿತಿಯು ಟ್ಯಾಬ್ಲೋಗಳನ್ನು ಆಯ್ಕೆ ಮಾಡುತ್ತದೆ. ಕೆಲವೊಂದನ್ನು ಆಯ್ಕೆ ಮಾಡಿ ಕೆಲವನ್ನು ತಿರಸ್ಕರಿಸಲಾಗುತ್ತಿದೆ. ಈ ಬಾರಿ ಕರ್ನಾಟಕ ನಾಲ್ಕು ವಿಷಯದ ಮೇಲೆ ಪರಿಕಲ್ಪನೆ ಸಲ್ಲಿಸಲಾಗಿದ್ದು, ಎಲ್ಲವೂ ತಿರಸ್ಕೃತಗೊಂಡಿವೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಈ ಬಾರಿ ಬ್ರಾಂಡ್ ಬೆಂಗಳೂರು, ನಾಲ್ವಡಿ ಕೃಷ್ಣರಾಜ ಒಡೆಯರ್, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ 2 ಮತ್ತು ಬೆಂಗಳೂರು ಅಣ್ಣಮ್ಮ ದೇವಿ ದೇವಸ್ಥಾನದ ಥೀಮ್ ಕಲ್ಪನೆಗಳನ್ನು ಆಯ್ಕೆ ಸಮಿತಿಗೆ ಕಳುಹಿಸಿತ್ತು. ಆದರೆ ಎಲ್ಲಾ ನಾಲ್ಕು ಪರಿಕಲ್ಪನೆಗಳನ್ನು ತಿರಸ್ಕರಿಸಲಾಗಿದೆ ಎಂದು ತಿಳಿದು ಬಂದಿದೆ.
ಕರ್ನಾಟಕವು ಸತತ 14 ವರ್ಷಗಳಿಂದ ಟ್ಯಾಬ್ಲೋಗಳನ್ನು ಕಳುಹಿಸುತ್ತಿದೆ. ಸತತ 14 ವರ್ಷಗಳಿಂದ ಟ್ಯಾಬ್ಲೋ ವಿಭಾಗದಲ್ಲಿ ಭಾಗವಹಿಸಿದ ದೇಶದ ಏಕೈಕ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. 2023 ರ ಗಣರಾಜ್ಯೋತ್ಸವದ ಪರೇಡ್ ನಲ್ಲಿ ಕರ್ನಾಟಕದ ‘ನಾರಿ ಶಕ್ತಿ’ ಟ್ಯಾಬ್ಲೋ ಸಾಗಿತ್ತು.


