ಇಂದಿನಿಂದ ದೇಶದಲ್ಲಿ ಹೊಸ ಇತಿಹಾಸದ ಉದಯವಾಗಲಿದೆ. ಇಂದು ನಮ್ಮ ರಾಮ ಬಂದಿದ್ದಾನೆ. ಶ್ರೀರಾಮನ ಆಗಮನದಿಂದ ಇಡೀ ದೇಶದಲ್ಲಿ ಸಂಭ್ರಮ ಮನೆ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನುಡಿದರು.
ಇಂದು ರಾಮಜನ್ಮಭೂಮಿ ಅಯೋಧ್ಯೆ ರಾಮಮಂದಿರದಲ್ಲಿ ಶ್ರೀ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿ ಬಳಿಕ ಸಾರ್ವಜನಿಕ ಬೃಹತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮಾತನಾಡಿದರು.
ಇಂದು ನಮ್ಮ ರಾಮ ಬಂದಿದ್ದಾನೆ. ಅನೇಕ ಜನರ ತ್ಯಾಗ, ಬಲಿದಾನ, ಶ್ರಮದ ಫಲವಾಗಿ ಪ್ರಭು ಶ್ರೀರಾಮ ಚಂದ್ರ ಮತ್ತೆ ಬಂದಿದ್ದಾನೆ. ವರ್ಷಗಳ ಹೋರಾಟದ ಬಳಿಕ ರಾಮ ಬಂದಿದ್ದಾನೆ. ಈ ಶುಭ ಘಳಿಗೆ ಹಿನ್ನೆಲೆ ಎಲ್ಲರಿಗೂ ಶುಭಾಶಯ. ಹೇಳಲು ಎಷ್ಟೊಂದು ವಿಷಯಗಳು ಇವೆ. ಆದರೆ, ಮಾತುಗಳೇ ಹೊರಳದೇ ನನ್ನ ಕಂಠ ತುಂಬಿ ಬರುತ್ತಿದೆ. ನಮ್ಮ ರಾಮಲಲ್ಲಾ ಇನ್ಮುಂದೆ ಟೆಂಟ್ ನಲ್ಲಿ ಇರಲ್ಲ, ನಮ್ಮ ರಾಮ ಲಲ್ಲಾ ದಿವ್ಯ ಮಂದಿರದಲ್ಲಿ ಇರಲಿದ್ದಾನೆ ಎಂದು ಪ್ರಧಾನಿ ಮೋದಿ ಹೇಳಿದರು.
ಈ ಕ್ಷಣ ಅತ್ಯಂತ ಪವಿತ್ರವಾದದ್ದು. 2024 ರ ಜನವರಿ 22 ಇದು ಕೇವಲ ದಿನಾಂಕ ಅಲ್ಲ, ಹೊಸ ಕಾಲಚಕ್ರದ ಉದಯ. ಗುಲಾಮಿ ಮನಸ್ಥಿತಿಯನ್ನು ಎದುರಿಸಿ ನಮ್ಮ ರಾಷ್ಟ್ರ ಎದ್ದು ನಿಂತ ಕ್ಷಣವಿದು. ಇಂದಿನಿಂದ ದೇಶದಲ್ಲಿ ಹೊಸ ಇತಿಹಾಸದ ಉದಯವಾಗಲಿದೆ. ದೇಶದಲ್ಲಿ ಇಂದು ಪ್ರತಿದಿನವೂ ಒಂದು ವಿಶ್ವಾಸ ಮೂಡುತ್ತಿದೆ. ಈ ಕ್ಷಣ ದೈವಿಕ ಅನುಭವವನ್ನು ಪಡೆಯುತ್ತಿದ್ದೇನೆ ಎಂದರು.
ಕಾಲಚಕ್ರ ಬದಲಾಗುತ್ತಿರುವುದು ನನಗೆ ಗೊತ್ತಿದೆ. ಬದಲಾದ ಕಾಲಚಕ್ರದ ಶಿಲ್ಪಿಗಳಾಗಿ ನಾವು ಆಯ್ಕೆಯಾಗಿದ್ದೇವೆ. ಮುಂದಿನ ಸಾವಿರಾರು ವರ್ಷದ ಅಡಿಪಾಯ ಈಗ ಹಾಕಬೇಕು. ಸಮಸ್ತ ಸಕ್ಷಮ, ಭವ್ಯ ದಿವ್ಯ ಭಾರತ ನಿರ್ಮಾಣದ ಪ್ರಮಾಣ ಮಾಡೋಣ ಎಂದು ಪ್ರಧಾನಿ ಮೋದಿ ತಿಳಿಸಿದರು.
ಕೇವಲ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಅಲ್ಲ. ದೇಶದ ಸಾಂಸ್ಕೃತಿಕ ಮೌಲ್ಯಗಳ ಪ್ರಾಣ ಪ್ರತಿಷ್ಠೆಯಾಗಿದೆ. ರಾಮಮಂದಿರ ರಾಷ್ಟ್ರಚೇತನದ ಮಂದಿರ. ರಾಮ ಭಾರತದ ಆತ್ಮ ಚೇತನ, ಚಿಂತನ ರಾಮ ನೀತಿಯೂ ಹೌದು ಎಂದು ಹೇಳಿದರು.


