ಬೆಂಗಳೂರು: ಬೆಂಗಳೂರಿನ ಉದ್ಯಾನವೊಂದರ ಬಳಿ ಕಾರಿನಲ್ಲೇ ಬೆತ್ತಲಾಗಿ ಕಾಮತೃಷೆ ತೀರಿಸಿಕೊಳ್ಳಲು ಮುಂದಾಗಿ ಜೋಡಿಯೊಂದು ಎಡವಟ್ಟು ಮಾಡಿಕೊಂಡ ಘಟನೆ ನಡೆದಿದೆ.
ಪಾರ್ಕ್ ನಲ್ಲಿ ಅನೇಕ ಮಂದಿ ಇದ್ದರೂ, ಅವರಿಗೆಲ್ಲ ತಾವು ಕಾಣಿಸುತ್ತಿದ್ದರೂ ಅದನ್ನು ಲೆಕ್ಕಿಸದೆ ಜೋಡಿ ಸರಸದಲ್ಲಿ ತಲ್ಲೀನರಾಗಿದ್ದಾರೆ. ಇದೇ ವೇಳೆ ಅಲ್ಲಿ ಕರ್ತವ್ಯ ನಿರತರಾಗಿದ್ದ ಸಬ್ ಇನ್ಸ್ ಪೆಕ್ಟರ್ ಮಹೇಶ್ ಆ ಜೋಡಿಯನ್ನು ಗಮನಿಸಿ, ಬುದ್ಧಿಹೇಳಲು ಕಾರಿನ ಬಳಿ ತೆರಳಿದ್ದಾರೆ.
ಕಾರಿನ ಬಳಿ ಹೋಗಿ ನಂಬರ್ ಪ್ಲೇಟ್ ಪರಿಶೀಲನೆ ನಡೆಸಿದ ಸಬ್ ಇನ್ಸ್ ಪೆಕ್ಟರ್ ನನ್ನು ಕಂಡ ಜೋಡಿಯು ತಕ್ಷಣ ಎಚ್ಚೆತ್ತುಕೊಂಡು, ಯುವಕ ಏಕಾಏಕಿ ಕಾರು ಚಲಾಯಿಸಿದ್ದಾನೆ. ದಿಢೀರ್ ಕಾರು ಚಲಿಸಲು ಆರಂಭಿಸಿದ ಕಾರಣ ಸಬ್ ಇನ್ಸ್ ಪೆಕ್ಟರ್ ಮಹೇಶ್ ಬಾನೆಟ್ ಮೇಲೆ ಬಿದ್ದಿದ್ದಾರೆ. ಅವರು ಕಾರಿನ ಬಾನೆಟ್ ಹಿಡಿದುಕೊಂಡು ಒದ್ದಾಡುತ್ತಿದ್ದರೂ ಲೆಕ್ಕಿಸದ ಯುವಕ ಕಾರು ಚಲಾಯಿಸಿ, ಏಕಾಏಕಿ ಕಾರನ್ನು ರಿವರ್ಸ್ ತೆಗೆದು ಮತ್ತೆ ಮುಂದಕ್ಕೆ ಚಲಾಯಿಸಿದ್ದಾನೆ. ಪರಿಣಾಮವಾಗಿ ಕೆಳಬಿದ್ದ ಸಬ್ ಇನ್ಸ್ ಪೆಕ್ಟರ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸದ್ಯ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮಹೇಶ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


