ತುಮಕೂರು: ಕಲೆ ಯಾರೊಬ್ಬರ ಸೊತ್ತಲ್ಲ ಹಾಗೆಯೇ ಕಲೆಯು ಸುಖಾಸುಮ್ಮನೆ ಒಲಿಯುವಂತದ್ದಲ್ಲ ಅದು ಶ್ರಮದಿಂದ ಮೈಮನಸ್ಸಿನಲ್ಲಿ ಪಡೆದುಕೊಳ್ಳುವಂತಹದ್ದು ಎಂದು ನಾಡಿನ ಹಿರಿಯ ಚಿತ್ರಕಲಾವಿದರು ಹಾಗೂ ನಿವೃತ್ತ ಶಿಕ್ಷಕರಾದ ಪಿ.ಎಸ್.ಗ್ರಾಮ್ ಪುರೋಹಿತ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಸರ್ಕಾರಿ ಚಿತ್ರಕಲಾ ಪದವಿ ಕಾಲೇಜಿನಲ್ಲಿ ಶುಕ್ರವಾರ 75ನೇ ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ವಿದ್ಯಾರ್ಥಿಗಳ ಸಮೂಹ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಮೊದಲು ನಾಡು, ನುಡಿ, ಭಾಷೆ, ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಬೇಕು ಹಾಗೂ ವಿನಯ, ತಾಳ್ಮೆ ಮೈಗೂಡಿಸಿಕೊಂಡು ನಡೆಯುವ ದಾರಿಯಲ್ಲಿ ಸಾಗಿದರೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. ದೇಶದಲ್ಲಿ ಹೋರಾಟದ ಕಿಚ್ಚಿನಿಂದ ಹಲವು ಸಾವು-ನೋವುಗಳ ಸಂದರ್ಭಗಳು ಬಂದು ಹೋಗಿವೆ. ಇದರ ಮಧ್ಯೆಯೂ ಬಡತನದಿಂದ ಬಂದ ಹಲವರು ಇಂದು ಜ್ಞಾನಿಗಳಾಗಿ ನಮ್ಮ ಮುಂದೆ ಬಂದು ನಿಂತಿದ್ದಾರೆ. ಅಂತಹ ಮಹಾನ್ ನಾಯಕರ ಇತಿಹಾಸವನ್ನು ಅರಿತು ನಡೆದರೆ ಬದುಕಿಗೊಂದು ಅರ್ಥ ಬರುತ್ತದೆ ಎಂದು ಹೇಳಿದರು.
ಕಲೆ ಎಲ್ಲಾರಿಗೂ ಒಲಿಯುವುದಿಲ್ಲ. ಅದು ಒಮ್ಮೆ ಒಲಿದರೆ ಅಷ್ಟು ಸುಲಭವಾಗಿ ಬಿಟ್ಟು ಹೋಗುವುದಿಲ್ಲ ಕಲೆ, ಸಂಸ್ಕೃತಿ ಉಳಿಸುವ ಕೆಲಸ ಸಧ್ಯ ಆಳುವ ಸರ್ಕಾರಗಳಿಂದ ಆಗಬೇಕಿದೆ. ವಿದ್ಯಾರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳ ಅಭಿವೃದ್ಧಿ ಕಡೆ ಗಮನಕೊಡಬೇಕು. ಹಿರಿಯರ ಹಾಗೂ ಉಪನ್ಯಾಸಕರ ಮಾರ್ಗದರ್ಶನ ಪಡೆದು ತಮ್ಮ ವಿಷಯಗಳಲ್ಲಿ ಪರಿಣಿತಿ ಹೊಂದಿ ಮುಂದೆ ಬರಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚಿತ್ರಕಲಾವಿದ ಜಿ.ಎಲ್.ನಟರಾಜ ಅವರು ಮಾತನಾಡಿ, ರಾಜ್ಯದಲ್ಲಿ 2 ಸರ್ಕಾರಿ ಚಿತ್ರಕಲಾ ಪದವಿ ಕಾಲೇಜುಗಳಿದ್ದು, ಮೂಲಭೂತ ಸೌಲಭ್ಯ ಕೊರತೆಯಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸರ್ಕಾರವು ಕೂಡಲೇ ಸರ್ಕಾರಿ ಚಿತ್ರಕಲಾ ಪದವಿ ಕಾಲೇಜಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಕೂಡಲೇ ಒದಗಿಸಬೇಕು ಎಂದು ಒತ್ತಾಯಿಸಿದರು.
ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಅಗತ್ಯ ಸೌಲಭ್ಯ ಕೊರತೆ ನೀಗಿಸುವ ಪ್ರಯತ್ನವನ್ನು ಮಾಡುತ್ತಾ ಬಂದಿದೆ. ಆದಷ್ಟು ವಿದ್ಯಾರ್ಥಿಗಳು ಕಾಲೇಜಿಗೆ ಹಾಜಾರಾಗಿ ತಮ್ಮ ಪ್ರತಿಭೆ ಅನಾವರಣಗೊಳಿಸುವ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.
ಹಿರಿಯ ಚಿತ್ರಕಲಾವಿದ ಎಂ.ಎನ್.ಸುಬ್ರಮಣ್ಯ ಮಾತನಾಡಿ, ವಿದ್ಯಾರ್ಥಿಗಳು ಮೊದಲು ಕಾಲೇಜಿಗೆ ಗೈರಾಗದೆ ಸಮಯಪೂರ್ತಿ ಅಭ್ಯಾಸದ ಕಡೆ ಗಮನಹರಿಸಬೇಕು. ವರ್ತನೆಯಲ್ಲಿ ಮತ್ತೊಬ್ಬರು ನಿಮ್ಮನ್ನು ನೋಡಿ ಕಲಿಯುವಂತಿರಬೇಕು. ಚಿತ್ರಕಲೆಯಲ್ಲಿ ಚಿತ್ರ ಅಭ್ಯಾಸ ಬಹಳ ಮುಖ್ಯ ಆದಷ್ಟು ಉಪನ್ಯಾಸಕರ ಮಾರ್ಗದರ್ಶನ ಪಡೆದು ಉತ್ತಮ ಶಿಕ್ಷಕರಾಗುವ ಕಡೆ ಹೆಜ್ಜೆ ಹಾಕಬೇಕು. ವಿದ್ಯಾರ್ಥಿಗಳು ಪಾಠ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಯಶಸ್ಸನ್ನು ನಿರೀಕ್ಷಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಸಿ.ಸಿ.ಬಾರಕೇರ ಅವರು, ಸರ್ಕಾರಿ ಶಾಲೆಗಳಲ್ಲಿ ಓದುವುದೆ ಒಂದು ಧನ್ಯಭಾವ, ಸರ್ಕಾರ ನೀಡುವ ಸವಲತ್ತುಗಳನ್ನು ಪಡೆದುಕೊಂಡು ಉತ್ತಮ ವಿದ್ಯಾಭ್ಯಾಸವನ್ನು ಮಾಡುವತ್ತ ವಿದ್ಯಾರ್ಥಿಗಳು ಗಮನಹರಿಸಬೇಕು. ಮಾನವನಾಗಿ ಹುಟ್ಟಿದ ಮೇಲೆ ಜೀವನದಲ್ಲಿ ಕಲೆಯ ಪ್ರತಿಭೆಯನ್ನು ಸಮಾಜಕ್ಕೆ ಅನಾವರಣಗೊಳಿಸುವ ಮೂಲಕ ಬದುಕನ್ನು ಯಶಸ್ಸುಗೊಳಿಸಬೇಕಿದೆ. ಕಲಾವಿದರು ಜಗತ್ತನ್ನು ಸುತ್ತುವುದನ್ನು ಕಲಿಯಬೇಕು. ಹಾಸ್ಯ ಮನೋಭಾವವನ್ನು ಮೂಡಿಸಿಕೊಂಡು ಕಲೆಯ ಅಭಿವೃದ್ಧಿಯಲ್ಲಿ ಸಾಗಬೇಕು. ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಮಾದರಿಯಾಗುವಂತೆ ನಡೆದುಕೊಳ್ಳಬೇಕು. ಕಲೆ ಕಲಿಯುವುದೇ ಕಲಾ ವಿದ್ಯಾರ್ಥಿಗಳ ಹಠವಾಗಿರಬೇಕು. ಚಿತ್ರಕಲೆಯನ್ನು ಸರಿಯಾದ ಮಾರ್ಗದಲ್ಲಿ ಕಲಿತರೆ ಬದುಕು ಕಟ್ಟಿಕೊಳ್ಳಲು ಸುಲಭವಾಗುತ್ತದೆ ಆ ದೃಷ್ಟಿಯಲ್ಲಿ ಶ್ರದ್ದೆಯಿಂದ ಕಲಿಯುವಂತಹ ಜಾಣ್ಮೆ ನಿಮ್ಮಲ್ಲಿರಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಡಾ.ಸುರೇಂದ್ರನಾಥ್ ಡಿ.ಆರ್, ಡಾ.ಸಂತೋಷಕುಮಾರ್ ನಾಗರಾಳ, ಡಾ.ಶ್ವೇತ ಡಿ.ಎಸ್, ರಂಗಸ್ವಾಮಿ ಆರ್, ಸತ್ಯನಾರಾಯಣ ಹಾಗೂ ವಿದ್ಯಾರ್ಥಿಗಳು ಇದ್ದರು.
75ನೇ ಗಣರಾಜ್ಯೋತ್ಸವದ ಪ್ರಯುಕ್ತ ಚಿತ್ರಕಲಾಕೃತಿಗಳ ಪ್ರದರ್ಶನದಲ್ಲಿ ವಿದ್ಯಾರ್ಥಿಗಳಾದ ಧನುಷ್ ಎಸ್, ವಿದ್ಯಾಬಾಯಿ ಬಿ.ಎಚ್, ಪಲ್ಲವಿ ಎಂ, ಅಕ್ಷತಾ ನಾಯ್ಕರ್, ಅರುಣಕುಮಾರ, ಶಿರಿಶ.ಎಲ್, ಕಲ್ಯಾಣಿ ಎಂ, ಕುಶಾಲ್.ಆರ್, ಮುಧು ಬಿ.ಜಿ, ಲಕ್ಷ್ಮೀ ಎನ್. ಕೆ,ಕಮಲಾ, ಅಮೃತಮ್ಮ.ಡಿ, ತೇಜಸ್ವಿನಿ ಡಿ.ಸಿ, ದೀಪು ಎಂ.ಡಿ, ಕಿರಣ್ ಎಸ್, ಭರತ್, ಹರಿಣಿ.ಬಿ, ಸುಕ್ತ ವಿ.ಟಿ, ಶ್ರೀವಿದ್ಯಾ. ಟಿ.ಎಸ್ ಭಾಗವಹಿಸಿದ್ದರು.