ಕೊಡಗು: ಕೆಎಸ್ ಆರ್ ಟಿಸಿ ಬಸ್ ಮತ್ತು ಸ್ಕೂಟಿ ನಡುವೆ ಸಂಭವಿಸಿದ ಅಪಘಾತದಲ್ಲಿ, ಮಹಿಳೆಯೊಬ್ಬರು ದುರ್ಮರಣ ಹೊಂದಿದ್ದಾರೆ. ಸಿದ್ದಾಪುರ ಗ್ರಾಮದ ಲಲಿತಾ (53) ಮೃತಪಟ್ಟ ದುರ್ದೈವಿ.
ಸ್ಕೂಟಿ ಓಡಿಸುತ್ತಿದ್ದ ಸಿಂಚನಾ ಎಂಬುವವರ ಸ್ಥಿತಿ ಗಂಭೀರವಾಗಿದೆ. ಕೊಡಗಿನ ರಾಷ್ಟ್ರೀಯ ಹೆದ್ದಾರಿ 275ರ ಗುಡ್ಡೆಹೊಸೂರು ಬಳಿ ಅಪಘಾತ ಸಂಭವಿಸಿದ್ದು, ಮಡಿಕೇರಿಯಿಂದ ಮೈಸೂರಿಗೆ ಕೆಎಸ್ ಆರ್ ಟಿಸಿ ಬಸ್ ತೆರಳುತ್ತಿತ್ತು. ಇತ್ತ ಮಹಿಳೆಯರಿಬ್ಬರು ಅತ್ತೂರು ಕಡೆಯಿಂದ ಗುಡ್ಡೆಹೊಸೂರು ಕಡೆಗೆ ಸ್ಕೂಟಿಯಲ್ಲಿ ಬರುತ್ತಿದ್ದರು. ಈ ವೇಳೆ ಬಸ್ ಹಾಗೂ ಸ್ಕೂಟರ್ ಗೆ ಡಿಕ್ಕಿಯಾಗಿದೆ.
ಡಿಕ್ಕಿಯ ರಭಸಕ್ಕೆ ಬಸ್ಸಿನಡಿ ಸಿಲುಕಿದ ಸ್ಕೂಟಿ ನಜ್ಜುಗುಜ್ಜಾಗಿತ್ತು. ಮೃತ ಮಹಿಳೆ ಪರ್ಪಲ್ ಪಾಮ್ ರೆಸಾರ್ಟ್ ಸಿಬ್ಬಂದಿ ಎಂಬ ಮಾಹಿತಿ ಇದೆ. ಸ್ಥಳಕ್ಕೆ ಕುಶಾಲನಗರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.


