ಕಾಂಗ್ರೆಸ್ ನಿಂದ ನಾಯಕರು ನಿರ್ಗಮಿಸುತ್ತಿರುವ ಸರಣಿಯ ನಡುವೆ, ಹಿಮಂತ ಬಿಸ್ವ ಶರ್ಮ ಮತ್ತು ಮಿಲಿಂದ್ ದೇವರ ಅವರಂತಹವರು ಪಕ್ಷದ ಸಿದ್ಧಾಂತಕ್ಕೆ ಹೊಂದಿಕೆಯಾಗದ ಕಾರಣ ಪಕ್ಷದಿಂದ ದೂರವಾಗಲಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಪಕ್ಷದ ‘ಡಿಜಿಟಲ್ ಮಾಧ್ಯಮ ಸೇನಾನಿ’ಗಳನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪಕ್ಷದ ಸಿದ್ಧಾಂತಕ್ಕೆ ಹೊಂದಿಕೆಯಾಗದ ನಾಯಕರು ಪಕ್ಷ ಬಿಡುವುದೇ ಉತ್ತಮ ಎಂದು ಅಭಿಪ್ರಾಯಪಟ್ಟರು.
ಹಿಮಂತ ಮತ್ತು ಮಿಲಿಂದ್ ಅವರಂತಹ ನಾಯಕರು ನಮ್ಮ ಪಕ್ಷದಿಂದ ನಿರ್ಗಮಿಸಬೇಕು. ಇದನ್ನು ನಾನು ಸಂಪೂರ್ಣ ಒಪ್ಪುತ್ತೇನೆ. ಹಿಮಂತ ಅವರು ನಿರ್ದಿಷ್ಟ ರೀತಿಯ ರಾಜಕೀಯವನ್ನು ಪ್ರತಿನಿಧಿಸುತ್ತಾರೆ, ಅದು ಕಾಂಗ್ರೆಸ್ ಪಕ್ಷದ ರಾಜಕೀಯವಲ್ಲ’ ಎಂದು ರಾಹುಲ್ ಹೇಳಿದರು.
‘ಹಿಮಂತ ಅವರು ಮುಸ್ಲಿಮರ ಬಗ್ಗೆ ನೀಡಿರುವ ಕೆಲವು ಹೇಳಿಕೆಗಳನ್ನು ನೀವು ಕೇಳಿದ್ದೀರಾ? ನಾನು ಅವರೊಂದಿಗೆ ಯಾವ ಚರ್ಚೆಯನ್ನೂ ಮಾಡಲು ಬಯಸುವುದಿಲ್ಲ’ ಎಂದು ರಾಹುಲ್ ಹೇಳಿದರು.


