ರಾಜ್ಯ ಸ್ಥಾನಮಾನಕ್ಕಾಗಿ ಲಡಾಖ್ ನಲ್ಲಿ ಬೃಹತ್ ಪ್ರತಿಭಟನೆ ಆರಂಭವಾಗಿದೆ. ಲೇ ಅಪೆಕ್ಸ್ ಬಾಡಿ ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ ಜಂಟಿಯಾಗಿ ಪ್ರತಿಭಟನೆಯನ್ನು ಆಯೋಜಿಸಿದ್ದವು. ಲಡಾಖ್ ಗೆ ರಾಜ್ಯ ಸ್ಥಾನಮಾನ, ಸಂವಿಧಾನದ ಆರನೇ ಶೆಡ್ಯೂಲ್ ನ ಅನುಷ್ಠಾನ ಮತ್ತು ಲೇಹ್ ಮತ್ತು ಕಾರ್ಗಿಲ್ ಜಿಲ್ಲೆಗಳಿಗೆ ಪ್ರತ್ಯೇಕ ಸಂಸದೀಯ ಸ್ಥಾನಗಳಿಗೆ ಆಗ್ರಹಿಸಿ ಪ್ರತಿಭಟನೆಗಳು ನಡೆಯುತ್ತಿವೆ.
ಹವಾಮಾನ ವೈಪರೀತ್ಯದ ನಡುವೆಯೂ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಅಂಗಡಿ ಮುಂಗಟ್ಟು ಬಂದ್ ಮಾಡಿ ಜನರು ಪ್ರತಿಭಟನೆ ನಡೆಸಿದರು.
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ, ಇದು ಕೇಂದ್ರಾಡಳಿತ ಪ್ರದೇಶವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಅಧಿಕಾರಶಾಹಿ ಆಡಳಿತ ಅನಿರ್ದಿಷ್ಟವಾಗಿ ಮುಂದುವರಿಯಲು ಸಾಧ್ಯವಿಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆ ಮರುಸ್ಥಾಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯು ಲಡಾಖ್ ಅನ್ನು ಸಂಪೂರ್ಣವಾಗಿ ಮುಚ್ಚಿತ್ತು. ಪ್ರತಿಭಟನೆಯಲ್ಲಿ ಭಾಗವಹಿಸಲು ಚೀನಾ ಗಡಿ ಮತ್ತು ನುಬ್ರಾ ಕಣಿವೆಯ ಜನರು ಲೇಹ್ ಗೆ ಬಂದರು. ಈ ನಾಲ್ಕು ಬೇಡಿಕೆಗಳು ಜಾರಿಯಾಗುವವರೆಗೂ ಒತ್ತಡ ಹೇರುತ್ತಲೇ ಇರುತ್ತೇವೆ ಎಂಬ ನಿಲುವು ಅವರದ್ದು. ಮೂಲನಿವಾಸಿಗಳಿಗೂ ಮೀಸಲಾತಿ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.


