ನನಗೆ ವಾಹನ ಖರೀದಿಸಿದ ಯಾವುದೇ ಅನುಭವವಿಲ್ಲ, ಸೈಕಲ್ ಕೂಡ ಖರೀದಿಸಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ದೆಹಲಿಯಲ್ಲಿ ಆಯೋಜನೆಗೊಂಡಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡುತ್ತಿದ್ದರು.
ಭಾರತದ ಆಟೋ ಮೊಬಿಲಿಟಿ, ಸಪ್ಲೈ ಚೈನ್ ಸೇರಿದಂತೆ ಸಂಪೂರ್ಣ ಸಂಪರ್ಕಿತ ವ್ಯವಸ್ಥೆಯನ್ನು ಒಂದು ಮಂಟಪದೊಳಗೆ ತಂದು ಎಕ್ಸ್‌ಪೋ ಆಯೋಜಿಸಲಾಗಿದೆ. ಭಾರತ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಹಾಗೂ ಮಾರಾಟಕ್ಕೆ ಹೆಚ್ಚಿನ ಉತ್ತೇಜನ ನೀಡಿದೆ. ಪ್ರಮುಖವಾಗಿ ಬ್ಯಾಟರಿ ಉತ್ಪಾದನೆ ಸರಿಯಾದ ಪ್ರಮಾಣದಲ್ಲಿ ನಾವು ಮಾಡಬೇಕಿದೆ. ಈ ಕುರಿತು ಇತ್ತೀಚೆಗೆ ಗ್ಲೋಬಲ್ ಸಮ್ಮಿಟ್‌ನಲ್ಲಿ ನಾನು ಪಾಲ್ಗೊಂಡಿದ್ದೆ. ಹಲವು ವಿಚಾರಗಳ ಕುರಿತು ಚರ್ಚೆ ನಡೆದಿತ್ತು. ಈ ವಿಚಾರಗಳನ್ನು ಮೂರನೇ ಅವಧಿ ಸರ್ಕಾರದಲ್ಲಿ ಜಾರಿಗೆ ತರಲಾಗುತ್ತದೆ ಎಂದು ಮೋದಿ ಹೇಳಿದ್ದಾರೆ.
ಮೋದಿಯ 3ನೇ ಬಾರಿಗೆ ಸರ್ಕಾರ ರಚನೆ ಮಾತು ಹೇಳುತ್ತಿದ್ದಂತೆ ಇಡೀ ಸಭಾಂಗಣದಲ್ಲಿದ್ದ ಉದ್ಯಮಿಗಳು, ತಜ್ಞರು ಮೋದಿ ಮೋದಿ ಎಂದು ಘೋಷಣೆ ಕೂಗಿದ್ದರು. ಹಲವು ವೇದಿಕೆಯಲ್ಲಿ ಹೇಳಿದಂತೆ ಇದು ಸರಿಯಾದ ಸಮಯ, ಸೂಕ್ತ ಸಮಯ. ಭಾರತ ವಿಶ್ವದಲ್ಲೇ ಅಗ್ರಗಣ್ಯ ದೇಶವಾಗಲು ಎಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯಬೇಕಿದೆ ಎಂದಿದ್ದಾರೆ.
ಚಾಲಕರಿಗಾಗಿ ಹೊಸ ಯೋಜನೆ ರೂಪಿಸಿದ್ದೇವೆ. ಬಿಡುವಿಲ್ಲದೆ ಪ್ರಯಾಣ ಮಾಡುವ ವಾಹನ ಚಾಲಕರಿಗೆ ಹೆದ್ದಾರಿಗಳಲ್ಲಿ ವಿಶ್ರಾಂತಿ ಪಡೆಯಲು, ಸ್ನಾನ, ಆಹಾರ, ಕುಡಿಯ ನೀರು, ವಾಹನ ಪಾರ್ಕಿಂಗ್ ಮಾಡಲು ಭವನ ನಿರ್ಮಾಣ ಮಾಡಲಾಗುತ್ತದೆ. ಈ ಮೂಲಕ ವಾಹನ ಚಾಲಕರ ಸುರಕ್ಷತೆಯಿಂದ ಚಾಲನೆಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಮೋದಿ ವಿವರಿಸಿದ್ದಾರೆ.
ಭಾರತದಲ್ಲಿ ರಬ್ಬರ್ ಕ್ಷೇತ್ರ ವಿಫುಲವಾಗಿದೆ. ನಾವು ಅತ್ಯುತ್ತಮ ಟೈಯರ್ ನಿರ್ಮಾಣ ಮಾಡುತ್ತಿದ್ದೇವೆ. ಆದರೆ ಜಾಗತಿಕ ಮಟ್ಟದಲ್ಲಿ ಭಾರತ ರಬ್ಬರ್ ಹಾಗೂ ಅದರ ಉತ್ಪನ್ನ ಕ್ಷೇತ್ರದಲ್ಲೂ ನಂಬರ್ 1 ಆಗಿ ಬೆಳೆಯಬೇಕು. ಇದಕ್ಕಾಗಿ ಉದ್ಯಮಿಗಳು, ರಬ್ಬರ್ ಉತ್ಪನ್ನಗಳ ಉದ್ಯಮಿಗಳು ರೈತರ ಜೊತೆ ಸೇರಿ ಮಾತುಕತೆ ನಡೆಸಿ ಅವರಿಂದ ನೇರವಾಗಿ ಉತ್ಪನ್ನ ಪಡೆದು ಉತ್ಪಾದನೆ ಮಾಡಲು ಪೂರಕ ವಾತವಾರಣ ಇದೀಗ ನಿರ್ಮಾಣವಾಗಿದೆ ಎಂದು ಮೋದಿ ಹೇಳಿದ್ದಾರೆ.


