ಕೇರಳ ಮೂಲದ ಯುವಕ ಮತ್ತು ಬೆಂಗಳೂರು ಮೂಲದ ಯುವತಿ ಪರಸ್ಪರ ಪರಿಚಿತರಾಗಿದ್ದರು. ಜತೆಯಾಗಿ ಪಣಂಬೂರು ಬೀಚ್ ನಲ್ಲಿ ತಿರುಗಾಡಲು ಬಂದಿದ್ದರು.
ಆದರೆ, ಹೀಗೆ ಬಂದಿದ್ದ ಯುವಕ ಮುಸ್ಲಿಂ ಎಂಬ ಸಂಶಯ ಅಲ್ಲಿದ್ದ ಕೆಲವರಿಗೆ ಬಂದಿತ್ತು. ಹಾಗಾಗಿ ಅವರು ಸ್ಥಳೀಯ ಶ್ರೀರಾಮ ಸೇನೆಯ ಯುವಕರಿಗೆ ವಿಷಯ ತಿಳಿಸಿದ್ದರು. ಶ್ರೀ ರಾಮ ಸೇನೆಯ ಯುವಕರು ಬೀಚ್ ಗೆ ಆಗಮಿಸಿ ಯುವಕ-ಯುವತಿ ಜೋಡಿಯನ್ನು ಅಡ್ಡಗಟ್ಟಿದರು.
ಇಬ್ಬರೂ ಬೇರೆ ಬೇರೆ ಧರ್ಮಗಳಿಗೆ ಸೇರಿದವರಾಗಿದ್ದು ಏಕೆ ಒಟ್ಟಿಗೆ ಇದ್ದೀರಿ ಎಂದು ಪ್ರಶ್ನಿಸಿದರು. ನಿಮ್ಮ ಮನೆಗಳಿಗೆ ವಿಷಯ ತಿಳಿಸುವುದಾಗಿ ಬೆದರಿಸಿದರು. ಅವರ ಮೇಲೆ ಹಲ್ಲೆ ನಡೆಸಲು ಮುಂದಾದರು. ಆಗ ಅವರು ಕೂಡಾ ನಮ್ಮನ್ನು ಪ್ರಶ್ನೆ ಮಾಡಲು ನೀವು ಯಾರು ಎಂದು ತಿರುಗಿ ಪ್ರಶ್ನಿಸಿದರು. ಒಂದು ಹಂತದಲ್ಲಿ ಗಲಾಟೆಯಾಗುವ ಸನ್ನಿವೇಶ ನಿರ್ಮಾಣವಾದಾಗ ಪಣಂಬೂರು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಆರೋಪಿಗಳನ್ನು ವಶಕ್ಕೆ ಪಡೆದರು. ಅವರ ವಿಚಾರಣೆ ನಡೆಸಿ ಬಂಧಿಸಲಾಗಿದೆ. ಇವರೆಲ್ಲರೂ ಶ್ರೀರಾಮ ಸೇನೆಗೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ.


