ದ್ವಿತೀಯ ಪಿಯುಸಿ ಪರೀಕ್ಷೆಯು ವಿದ್ಯಾರ್ಥಿ ಜೀವನದ ನಿರ್ಣಾಯಕ ಘಟ್ಟವಾಗಿರುವುದರಿಂದ, ವಿದ್ಯಾರ್ಥಿಗಳು ಏಕಾಗ್ರತೆಯಿಂದ ವ್ಯಾಸಂಗ ಮಾಡಿ ಗುರಿ ಸಾಧನೆ ಮಾಡಬೇಕು ಎಂದು ಶಾಸಕ ಹೆಚ್.ಟಿ. ಮಂಜು ಹೇಳಿದರು.
ಅವರು ಕೃಷ್ಣರಾಜಪೇಟೆ ಪಟ್ಟಣದ ಶ್ರೀ ಕೃಷ್ಣರಾಜ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಸಾಧನೆಗೆ ದ್ವಿತೀಯ ಪಿಯುಸಿ ಪರೀಕ್ಷೆಯು ನಿರ್ಣಾಯಕವಾದ ಘಟ್ಟವಾಗಿರುವುದರಿಂದ ಶ್ರದ್ಧಾ ಭಕ್ತಿಯಿಂದ ವ್ಯಾಸಂಗ ಮಾಡಿ ಗುರಿ ಸಾಧಿಸಲು ಸಂಕಲ್ಪ ಮಾಡಬೇಕು. ವಿದ್ಯೆಯ ಜ್ಞಾನದ ಬೆಳಕಿನ ಶಕ್ತಿಯು ಯಾರೂ ಕದಿಯಲಾಗದ ಆಸ್ತಿಯಾಗಿರುವುದರಿಂದ, ಸಾಮಾಜಿಕ ಅಸಮಾನತೆಗಳ ವಿರುದ್ಧ ಹೋರಾಟ ನಡೆಸಿ ಸಮ ಸಮಾಜವನ್ನು ನಿರ್ಮಿಸಲು ವಿದ್ಯೆಯ ಜ್ಞಾನದ ಶಕ್ತಿಯನ್ನು ಬಳಸಿಕೊಳ್ಳಬೇಕು. ಯುವಶಕ್ತಿಯು ಬಲಿಷ್ಠ ಶಕ್ತಿಯಾಗಿದ್ದು, ಸುಭದ್ರವಾದ ಸದೃಢ ರಾಷ್ಟ್ರದ ನಿರ್ಮಾಣಕ್ಕೆ ನಿರ್ಣಾಯಕವಾಗಿರುವುದರಿಂದ ಯುವಜನರು ದೇಶಪ್ರೇಮವನ್ನು ಬಳಸಿಕೊಂಡು ಸಮಾಜಮುಖಿಯಾಗಿ ಮುನ್ನಡೆಯಬೇಕು. ಸೇವಾ ಮನೋಭಾವನೆ ಹಾಗೂ ಪರೋಪಕಾರ ಗುಣಗಳು ಜೀವನದ ಉಸಿರಾಗಬೇಕು ಎಂದು ಮಂಜು ಕರೆ ನೀಡಿದರು.
ಬಂಡಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿಕ್ಷಣ ತಜ್ಞರಾದ ಗುಬ್ಬಿಯ ಡಾ. ಜಿ.ಬಿ. ಮಲ್ಲಪ್ಪ ಮಾತನಾಡಿ ಕೃಷ್ಣರಾಜಪೇಟೆ ತಾಲೂಕಿನಲ್ಲಿ 23 ಪದವಿ ಪೂರ್ವ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿದ್ದರೂ ಕೃಷ್ಣರಾಜ ಗುಣಾತ್ಮಕ ಶಿಕ್ಷಣಕ್ಕೆ ಹಾಗೂ ಅತ್ಯುತ್ತಮವಾದ ಫಲಿತಾಂಶಕ್ಕೆ ತಾಲೂಕಿನಲ್ಲಿಯೇ ಹೆಸರುವಾಸಿಯಾಗಿದೆ. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಪ್ರವೇಶದ ಸಂಖ್ಯೆಯು ಹೆಚ್ಚಾಗುತಿದೆಯಲ್ಲದೆ, ಕಾಲೇಜು ಅತ್ಯುತ್ತಮವಾದ ಫಲಿತಾಂಶವನ್ನು ಪಡೆದುಕೊಂಡು ಪ್ರಗತಿಯ ದಿಕ್ಕಿನತ್ತ ಸಾಗುತ್ತಿದೆ ಎಂದು ಹೇಳಿದರು.
ಕಾಲೇಜಿನ ಆಡಳಿತಾಧಿಕಾರಿ ಎಸ್.ಬಿ. ಲೋಕೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯುವ ಮುಖಂಡ ಶ್ರೀನಿವಾಸ್ ಕೇಸರಿ, ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ಪ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಂ.ಕೆ. ಹರಿಚರಣತಿಲಕ್, ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಪಡೆದು ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮಂಡ್ಯ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಕಾಲೇಜಿನ ವಿಶ್ರಾಂತ ಕನ್ನಡ ಉಪನ್ಯಾಸಕ ಹರಿಚರಣತಿಲಕ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.


