ವಿಜಯಪುರ: ಪತಿಯೊಬ್ಬ ಪತ್ನಿಯ ಶೀಲವನ್ನು ಶಂಕಿಸಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ವಿಜಯಪುರ ಜಿಲ್ಲೆಯ ತಿಕೋಟ ತಾ. ಹುಬನೂರು ತಾಂಡಾ -2ರಲ್ಲಿ ನಡೆದಿದೆ. ರೇಶ್ಮಾ ರಾಠೋಡ (25) ಮೃತ ದುರ್ದೈವಿ ಹಾಗೂ ಅಶೋಕ ರಾಠೋಡ (33) ಆರೋಪಿ ಪತಿಯಾಗಿದ್ದಾನೆ.
ಪತ್ನಿಯನ್ನು ಗುದ್ದಲಿಯಿಂದ ಹೊಡೆದು ಅಶೋಕ ರಾಠೋಡ ಕೊಲೆ ಮಾಡಿದ್ದಾನೆ. ಅವರ 11 ವರ್ಷಗಳ ದಾಂಪತ್ಯ ಜೀವನದಲ್ಲಿ ಮೂವರು ಮಕ್ಕಳು ಸಹ ಇದ್ದರು. ಆದರೆ ಕೆಲ ತಿಂಗಳಿನಿಂದ ಪತ್ನಿಗೆ ಅನೈತಿಕ ಸಂಬಂಧ ಇದೆ ಎಂದು ಸಂಶಯದಿಂದ ಆಗಾಗ ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಕುಡಿದು ಬಂದು ನಿತ್ಯ ಕಿರುಕುಳ ಕೊಡುತ್ತಿದ್ದ. ಪತಿಯ ಕಿರುಕುಳ ತಾಳಲಾರದೆ ಪತ್ನಿ ರೇಶ್ಮಾ ತವರು ಮನೆಗೆ ಹೊರಟು ಹೋಗಿದ್ದಳು.
ಆದರೂ ಸುಮ್ಮನಾಗದ ಪತಿ ಅಲ್ಲಿಗೂ ಹೋಗಿ ಜಗಳ ಮಾಡಿ, ಮಲಗಿದ್ದವಳ ಮೇಲೆ ಗುದ್ದಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ದೂರು ದಾಖಲಿಸಿಕೊಂಡಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.


