ಕುಡಿಯುವ ನೀರಿಗಾಗಿ ಬೀದರ್ ಜಿಲ್ಲೆಯ ಔರಾದ ತಾಲೂಕಿನ ಬೋರಾಳದಲ್ಲಿ ಹಾಹಾಕಾರ ಸೃಷ್ಟಿಯಾಗಿದ್ದು, ಇಲ್ಲಿನ ಜನತೆ ದಿನನಿತ್ಯ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.
ಔರಾದ ತಾಲೂಕಿನ ಎಕಲಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬೋರಾಳ ಗ್ರಾಮದಲ್ಲಿ ನೀರು ಪೂರೈಸುವ ಪೈಪ್ ಒಡೆದು ಹೋಗಿದೆ. ಹೀಗಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಗಳ ಜನರು ವಾಸಿರುವ ಗ್ರಾಮಗಳು ಸೇರಿದಂತೆ ಗ್ರಾಮದ ಅರ್ಧಕ್ಕೂ ಹೆಚ್ಚು ಪ್ರದೇಶದ ಜನರು ಮೂರು ದಿನಗಳಿಂದ ನೀರಿಲ್ಲದೇ ಪರದಾಡುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗ್ರಾಮ ಪಂಚಾಯತ್ ಸದಸ್ಯ ಮಾದೇವ ಮಚ್ಕೂರಿ, ಜನರ ಸಮಸ್ಯೆ ಪರಿಹರಿಸುವಂತೆ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಪಿಡಿಓಗೆ ನಾನು ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದೇನೆ. ಆದ್ರೆ ಅವರು ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರಲ್ಲದೇ, ಗ್ರಾಮಸ್ಥರ ಕಷ್ಟ ನೋಡಲಾಗದೇ ತಾನೇ ಒಂದು ಟ್ಯಾಂಕರ್ ನೀರು ತಂದು ಜನರಿಗೆ ಪೂರೈಕೆ ಮಾಡಿರುವುದಾಗಿ ತಿಳಿಸಿದರು.
ದಲಿತ ಸೇನೆ ತಾಲ್ಲೂಕು ಅಧ್ಯಕ್ಷ ಉಮಾಕಾಂತ ಸೋನೆ ಮಾತನಾಡಿ, ನಮ್ಮ ಊರಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ನಾಲ್ಕು ಕೊಳವೆ ಬಾವಿ ಪೈಕಿ ಎರಡು ಮಾತ್ರ ಕೆಲಸ ಮಾಡುತ್ತಿವೆ. ಹೀಗಾಗಿ, ಔರಾದ ತಾಲೂಕಿನ ಬೋರಾಳ ಗ್ರಾಮದ ಜನರಿಗೆ ಕುಡಿಯುವ ನೀರು ಸಿಗುತ್ತಿಲ್ಲ. ಗ್ರಾಮದಲ್ಲಿ ನಡೆಯುತ್ತಿರುವ ಜೆಜೆಎಂ ಕಾಮಗಾರಿ ನಿಯಾಮಾನುಸಾರ ಆಗುತ್ತಿಲ್ಲ. ಕೇಳಲು ಹೋದರೆ ಬೆದರಿಕೆ ಉತ್ತರ ಬರುತ್ತಿದೆ ಎಂದು ದೂರಿದರು.
ತಾಲ್ಲೂಕು ಪಂಚಾಯಿತಿ ಇಓ ಬೀರೇಂದಸೀಂಗ್ ಠಾಕೂರ್ ಈ ಬಗ್ಗೆ ಪ್ರತಿಕ್ರಿಯಿಸಿ, ಜೆಜೆಎಂ ಕಾಮಗಾರಿ ನಡೆಯುತ್ತಿರುವುದರಿಂದ ಪೈಪ್ ಕಟ್ ಆಗಿ ನೀರು ಪೂರೈಕೆಗೆ ಸಮಸ್ಯೆಯಾಗಿರುವುದು ತಿಳಿದ ತಕ್ಷಣ ದುರಸ್ತಿ ಮಾಡಲು ಸಂಬಂಧಿತರಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ವರದಿ: ಅರವಿಂದ ಮಲ್ಲಿಗೆ


