ಯುವಕನೊಬ್ಬ ತನ್ನ ಮದುವೆಗೆ ಮುಂಚೆ ತನ್ನ ಹಲ್ಲನ್ನು ಸರಿಮಾಡಲು ಹೊಗಿ ಜೀವ ಕಳೆದುಕೊಂಡ ಘಟನೆ ಫೆಬ್ರವರಿ 16 ರಂದು ಹೈದರಾಬಾದ್ ಇಂಟರ್ನ್ಯಾಷನಲ್ ಡೆಂಟಲ್ ಕ್ಲಿನಿಕ್ ನಲ್ಲಿ ನಡೆದಿದೆ.ಮೃತನನ್ನು 28 ವರ್ಷದ ಲಕ್ಷ್ಮಿ ನಾರಾಯಣ ವಿಂಜಮ್ ಎಂದು ಗುರುತಿಸಲಾಗಿದೆ.
ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ಎಫ್‌ಎಂಎಸ್ ಇಂಟರ್‌ನ್ಯಾಶನಲ್ ಡೆಂಟಲ್ ಕ್ಲಿನಿಕ್‌ನಲ್ಲಿ ‘ಸ್ಮೈಲ್ ಡಿಸೈನಿಂಗ್’ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಯುವಕ ಸಾವನ್ನಪ್ಪಿದ್ದಾನೆ.
ಲಕ್ಷ್ಮಿ ನಾರಾಯಣ ಅವರ ಸಾವಿಗೆ ಅತಿಯಾದ ಅರಿವಳಿಕೆ ಕಾರಣ ಎಂದು ಅವರ ತಂದೆ ರಾಮುಲು ಆರೋಪಿಸಿದ್ದಾರೆ. ಚಿಕಿತ್ಸೆಯ ವೇಳೆ ಮಗ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಕೂಡಲೇ ಕ್ಲಿನಿಕ್‌ಗೆ ಬರುವಂತೆ ಹೇಳಿದರು ಎಂದು ರಾಮುಲು ವಿವರಿಸಿದರು. ಕೂಡಲೇ ಅವರನ್ನು ಬೇರೆ ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ ಎಂದು ರಾಮುಲು ಹೇಳಿದ್ದಾರೆ.
ಶಸ್ತ್ರ ಚಿಕಿತ್ಸೆ ಬಗ್ಗೆ ಮಗ ತನಗೆ ಏನನ್ನೂ ಹೇಳಿಲ್ಲ ಎಂದು ರಾಮುಲು ಹೇಳಿದ್ದಾರೆ. ಮಗನಿಗೆ ಬೇರೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಮಗನ ಸಾವಿಗೆ ವೈದ್ಯರೇ ಕಾರಣ ಎಂದು ಆರೋಪಿಸಿದರು. ಸಂಬಂಧಿಕರ ದೂರಿನ ಮೇರೆಗೆ ಪೊಲೀಸರು ಕ್ಲಿನಿಕ್ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.


