ತುರುವೇಕೆರೆ: ಅಮ್ಮಸಂದ್ರ ಸಿಮೆಂಟ್ ಕಾರ್ಖಾನೆಯ ಹೆಚ್.ಆರ್.ಮ್ಯಾನೇಜರ್ ಮಂಜುನಾಥಸ್ವಾಮಿಯವರ ವಿರುದ್ಧ ಜಾತಿ ನಿಂದನೆ ಎರಡು ಮೊಕದ್ದಮೆ ದಾಖಲಾಗಿದೆ. ಆದರೂಕೂಡ ಪೊಲೀಸರು ಅವರನ್ನು ಬಂಧಿಸುವಲ್ಲಿ ಮೀನಾಮೇಷ ಎಣಿಸುತ್ತಿದ್ದಾರೆ ಎಂದು ದಲಿತ ಮುಖಂಡ ಹೊನ್ನೇನಹಳ್ಳಿ ಕೃಷ್ಣಪ್ಪ ಆರೋಪಿಸಿದ್ದಾರೆ.
ತುರುವೇಕೆರೆ ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತರ ಮೇಲೆ ಪದೇ ಪದೇ ದೌರ್ಜನ್ಯ ನಡೆಯುತಿದ್ದರೂ ಪೊಲೀಸರು ಮೌನ ವಹಿಸಿದ್ದಾರೆ ಎಂದರು.
ಮಂಜುನಾಥ ಸ್ವಾಮಿಯವರ ಮೇಲೆ ಎರಡು ಜಾತಿನಿಂದನೆ ಮೊಕದ್ದಮೆ ದಾಖಲಾಗಿದ್ದರೂ ಸಹ ಇದುವರೆಗೂ ಅವರನ್ನು ಬಂಧಿಸಿಲ್ಲ. ಅವರಿಗೆ ಜಾಮೀನು ತೆಗೆದುಕೊಳ್ಳುವುದಕ್ಕೆದಂಡಿನಶಿವರ ಪೊಲೀಸರೇ ಸಹಕರಿಸುತ್ತಿದ್ದಾರೆ ಎಂದು ಆರೋಪಿಸಿದರಲ್ಲದೇ, ಇದು ದಲಿತರಿಗೆ ಬಹಳ ನೋವಿನ ಸಂಗತಿ. ರಕ್ಷಣೆ ಕೊಡಬೇಕಾದ ಪೊಲೀಸ್ ಇಲಾಖೆಯೇ ಆರೋಪಿ ಬಲಾಢ್ಯನಾಗಿರುವುದರಿಂದ ಆರೋಪಿಯನ್ನು ದಸ್ತಗಿರಿ ಮಾಡದೆ ಇರುವುದು ದಲಿತರಿಗೆ ಮಾಡಿದ ಅವಮಾನ ಎಂದರು.
ಇಡೀ ವ್ಯಕ್ತಿ ಕಾರ್ಖಾನೆಯ ನೌಕರನಿಂದ ಬಲವಂತವಾಗಿ ಮಲ ಗುಂಡಿಯನ್ನು ಸ್ವಚ್ಛ ಗೊಳಿಸಿರುವುದು ಪರಮ ಅಪರಾಧವಾಗಿದ್ದು, ಅಲ್ಲದೇ ಕಾರ್ಮಿಕರಿಂದ ಬಲವಂತವಾಗಿ ಕಂಪನಿಯು ದಲಿತರ ಪರವಾಗಿದೆ ಎಂಬ ಪತ್ರಿಕಾ ಹೇಳಿಕೆಯನ್ನು ಸಹ ನೀಡಿಸಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇದು ಬಲವಂತವಾಗಿ ಹೇಳಿಸಿರುವ ಹೇಳಿಕೆಯಾಗಿದೆ ಇದಕ್ಕೆ ನಮ್ಮ ಬಳಿ ದಾಖಲೆಯಿದೆ. ಸುಮಾರು 12 ವರ್ಷಗಳಿಂದ ಅಂಬ್ಯುಲೆನ್ಸ್ ಡ್ರೈವರ್ ಆಗಿದ್ದ ಎಸ್.ಟಿ ಜನಾಂಗದ ವ್ಯಕ್ತಿಯನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಅವರ ಕುಟುಂಬದವರು ನ್ಯಾಯ ಕೇಳಲು ಕಂಪೆನಿಯ ಹತ್ತಿರ ಬಂದಾಗ ಅವರನ್ನು ಬಲವಂತವಾಗಿ ಹೊರಹಾಕಿಸಿದ್ದಾರೆ. ಇನ್ನು ಕೆಲವರನ್ನು ಕೆಲಸದಿಂದ ತೆಗೆದಾಗ ಕಾರ್ಮಿಕ ಸಂಘಟನೆ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದರಲ್ಲದೇ, 50 ವರ್ಷದಿಂದ ಇದುವರೆಗೂ ಕಂಪನಿ ಹಾಗೂ ರೈತರ ಜೊತೆ ತಿಕ್ಕಾಟ ನಡೆದಿರಲಿಲ್ಲ ಅದು ಈಗ ನಡೆಯುತ್ತಿದೆ ಎಂದರು.
ದಲಿತರಿಗೆ ಆಗುತ್ತಿರುವ ದೌರ್ಜನ್ಯಗಳ ಬಗ್ಗೆ ಕಂಪನಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ರಾಮಕೃಷ್ಣ, ಬಿಗನೇನಹಳ್ಳಿ ಪುಟ್ಟರಾಜು, ರಾಯಸಂದ್ರ ವಸಂತ ನರಸಿಂಹಮೂರ್ತಿ, ಆಕಾಶ್, ನರಸಿಂಹಮೂರ್ತಿ, ಕೃಷ್ಣಮೂರ್ತಿ ಕರಡಿ ಸೇರಿದಂತೆ ಹಲವರು ಇದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


