ಶ್ರೀನಗರ: ಜಮ್ಮು ಕಾಶ್ಮೀರವನ್ನು ಕೇವಲ ಒಂದು ಕ್ಷೇತ್ರವನ್ನಾಗಿ ನೋಡಲು ಸಾಧ್ಯವಿಲ್ಲ ಅದು ಭಾರತದ ಮಸ್ತಕ, ದೃಡವಾಗಿ ನಿಂತಿರುವ ಮಸ್ತಕ ವಿಕಾಸ ಮತ್ತು ಸಮ್ಮಾನದ ಪ್ರತೀಕವಾಗಿರುತ್ತದೆ, ಹೀಗಾಗಿ ವಿಕಸಿತ ಜಮ್ಮು ಕಾಶ್ಮೀರ ವಿಕಸಿತ ಭಾರತದ ಮೊದಲ ಆದ್ಯತೆಯಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಶ್ರೀನಗರದ ಬಕ್ಷಿ ಮೈದಾನದಲ್ಲಿ ನಡೆಯುತ್ತಿರುವ ‘ವಿಕಸಿತ ಭಾರತ, ವಿಕಸಿತ ಜಮ್ಮು ಕಾಶ್ಮೀರ’ ಕಾರ್ಯಕ್ರಮದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಜಮ್ಮು ಕಾಶ್ಮೀರ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು ಒಂದು ಕಾಲವಿತ್ತು ಭಾರತದಲ್ಲಿ ಒಂದು ಕಾನೂನು ಜಾರಿಯಾದರೆ ಅದು ಜಮ್ಮು ಕಾಶ್ಮೀರಕ್ಕೆ ಸೇರುತ್ತಿರಲಿಲ್ಲ, ಬಡವರಿಗಾಗಿ ಯೋಜನೆ ರೂಪಿಸಿದರೆ ಅದು ಜಮ್ಮು ಕಾಶ್ಮೀರಕ್ಕೆ ಸಿಗುತ್ತಿರಲಿಲ್ಲ ಆದರೆ ಈಗ ಹೇಗೆ ಕಾಲ ಬದಲಾಗಿದೆ ನೋಡಿ, ಶ್ರೀನಗರದಿಂದಲೇ ಹಲವು ರಾಜ್ಯಗಳಿಗೆ ಯೋಜನೆಗಳ ಚಾಲನೆ ನೀಡಲಾಗಿದೆ ಎಂದು ಹೇಳುವ ಮೂಲಕ ಆರ್ಟಿಕಲ್ 370 ವಿಧಿ ರದ್ದಾದ ವಿಚಾರ ಪ್ರಸ್ತಾಪಿಸಿದರು. ವಿಶೇಷ ಮಾನ್ಯತೆ ರದ್ದಾದ ಬಳಿಕ ಜಮ್ಮು ಕಾಶ್ಮೀರದಲ್ಲಿ ಅಭಿವೃದ್ಧಿ ಕಂಡಿದೆ. ಈ ವಿಧಿಯಿಂದ ಲಾಭ ಜಮ್ಮು ಕಾಶ್ಮೀರಕ್ಕಲ್ಲ ಕೆಲವು ರಾಜಕೀಯ ಕುಟುಂಬಗಳಿಗೆ ಮಾತ್ರ ಇತ್ತು ಎಂದು ವಾಗ್ದಾಳಿ ನಡೆಸಿದರು.
ಶ್ರೀನಗರಕ್ಕೆ ಆಗಮಿಸಿದ ಮೋದಿ ಸಭೆಯುದ್ದೇಶಿಸಿ ಮಾತನಾಡುವಾಗ ‘ ಶ್ರೀನಗರಕ್ಕೆ ಬಂದಿದ್ದು ಸ್ವರ್ಗಕ್ಕೆ ಬಂದಂತೆ ಭಾಸವಾಗುತ್ತಿದೆ, 2024ರ ಬಳಿಕ ನಾನು ಯಾವಾಗ ಜಮ್ಮು ಕಾಶ್ಮೀರಕ್ಕೆ ಬಂದಿದ್ದೆನೋ ಆಗೆಲ್ಲ ನಿಮ್ಮ ಹೃದಯ ಗೆಲ್ಲುವ ಪ್ರಯತ್ನ ಮಾಡಿದ್ದೇನೆ, ಕೊನೆಗೂ ನಿಮ್ಮ ವಿಶ್ವಾಸ, ಮನ ಗೆದ್ದಿದ್ದೇನೆ ಎಂದು ನನಗತ್ತಿಸುತ್ತದೆ, ನನ್ನ ಪ್ರಯತ್ನ ಮುಂದುವರೆಸುತ್ತೇನೆ ಇದು ಮೋದಿ ಗ್ಯಾರೆಂಟಿ’ ಎಂದು ಮೋದಿ ಸಂತಸ ವ್ಯಕ್ತಪಡಿಸಿದರು.
ವೋಕಲ್ ಫಾರ್ ಲೋಕಲ್ ಬಗ್ಗೆ ಮಾತನಾಡುತ್ತಾ ಮೋದಿ ಮತ್ತೆ ‘ ಭಾರತದಲ್ಲಿ ಮದುವೆ’ ವಿಚಾರ ಪ್ರಸ್ತಾಪಿಸಿದ್ದಾರೆ. ಜಮ್ಮು ಕಾಶ್ಮೀರ ಸ್ವರ್ಗದಂತಿದೆ, ಯಾವುದೋ ವಿದೇಶಕ್ಕೆ ಹೋಗುವ ಬದಲು ಇಲ್ಲಿ ಬಂದು ಮದುವೆಯಾಗಿ ಈ ಮೂಲಕ ಜಮ್ಮು ಕಾಶ್ಮೀರದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿ ಎಂದು ಕರೆ ನೀಡಿದ್ದಾರೆ.
ಜೊತೆಗೆ ಯಾವುದೇ ಕಾರಣಕ್ಕೂ ಜಮ್ಮು ಕಾಶ್ಮೀರ ಅಭಿವೃದ್ಧಿಯ ಅಭಿಯಾನ ನಿಲ್ಲುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಶ್ರೀನಗರ ಭೇಟಿಯಲ್ಲಿ ಪ್ರಧಾನಿ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


