ತುಮಕೂರು: ಜಿಲ್ಲೆಯ ಪಾವಗಡ ತಾಲೂಕು ನಿಡಗಲ್ಲು ಹೋಬಳಿ ಮತ್ತು ಗ್ರಾಮದಲ್ಲಿ ಮೊದಲನೇ ಬಾರಿಗೆ ಭಾರತ ರತ್ನ, ಸಂವಿಧಾನ ಶಿಲ್ಪಿ, ವಿಶ್ವ ನಾಯಕ, ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಅವರ 133 ನೇ ಜಯಂತಿಯನ್ನು ಆಚರಿಸಲಾಯಿತು.
ಪರಿಶಿಷ್ಟ ಸಮುದಾಯದ ಎಲ್ಲಾ ಮನೆಗಳಿಗೂ ಬುದ್ಧ, ಡಾ.ಬಿ ಆರ್. ಅಂಬೇಡ್ಕರ್ ಅವರ ಫೋಟೋ ತೆಗೆದುಕೊಂಡು ಹೋಗಿ ಸಂವಿಧಾನದ ಪೀಠಿಕೆ ಪ್ರತಿಜ್ಞೆ ಮಾಡುವ ಮುಖಾಂತರ ಸರಳವಾಗಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸರ್ಕಲ್ ಇನ್ಸ್ಪೆಕ್ಟರ್ ಎಸ್.ಆರ್.ರಾಘವೇಂದ್ರ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.
ಭಾರತೀಯ ಪರಿವರ್ತನ ಸಂಘ ತುಮಕೂರು ಜಿಲ್ಲಾಧ್ಯಕ್ಷರಾದ ಚಿಕ್ಕತಿಮ್ಮನಹಟ್ಟಿ ಗ್ರಾಮದ ಎಚ್.ಕೆಂಚರಾಯ ಮಾತನಾಡಿ, ಭಾರತದಲ್ಲಿ ಶಿಕ್ಷಣ ವ್ಯವಸ್ಥೆ ಸಂವಿಧಾನಕ್ಕಿಂತ ಮುಂಚೆ ಹೇಗಿತ್ತು, ಯಾರೆಲ್ಲಾ ವಿದ್ಯಾಭ್ಯಾಸ ಪಡೆಯುತ್ತಿದ್ದರು ಹಾಗೂ ವೋಟಿನ ಹಕ್ಕನ್ನು ಬಾಬಾ ಸಾಹೇಬರು ಮಹಿಳೆಯರನ್ನು ಒಳಗೊಂಡಂತೆ ಎಲ್ಲಾ ಸಮುದಾಯದ ಜನರಿಗೂ ತಂದುಕೊಡಲು 1918 ರಿಂದ 1932ರವರೆಗೆ ಹೋರಾಟ ಮಾಡಿದ ಪರಿಣಾಮ 1935 ರ ಕಾಯ್ದೆಯಲ್ಲಿ ಎಲ್ಲರಿಗೂ ಓಟಿನ ಹಕ್ಕು ದೊರೆಯಿತು ಹಾಗೂ ವೋಟಿನ ಮಹತ್ವವನ್ನು ತಿಳಿಸಿದರು.
ನಾಯದಗುಂಟೆ ಜೈ ಭೀಮ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ತಿಪ್ಪೇಸ್ವಾಮಿ ಸಂವಿಧಾನ ಪೀಠಿಕೆ ಪ್ರತಿಜ್ಞೆ ಮಾಡಿಸಿದರು, ನಿಡಗಲ್ಲು ಗ್ರಾಮದಲ್ಲಿ ಹಿಂದೂ ಮುಸ್ಲಿಂ ಎಲ್ಲಾ ಸಮುದಾಯದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಜೊತೆಗೆ ಚಿಕ್ಕತಿಮ್ಮನಹಟ್ಟಿ, ನ್ಯಾಯದಗುಂಟೆ ಹಾಗೂ ವಿವಿಧ ಗ್ರಾಮಗಳಿಂದ ಡಾ. ಬಿಆರ್ ಅಂಬೇಡ್ಕರ್ ಅವರ ಅನುಯಾಯಿಗಳು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296