ಸರಗೂರು: ಕಳೆದ ಒಂದು ವಾರದಿಂದ ಕಾಡಂಚಿನ ಗ್ರಾಮೀಣ ಭಾಗದಲ್ಲಿ ಹಾದನೂರು ಗ್ರಾಮದಲ್ಲಿ ಗುಡುಗು ಸಹಿತ ಸುರಿದ ಭಾರೀ ಗಾಳಿ ಮಳೆಗೆ ಮರ ಮತ್ತು ವಿದ್ಯುತ್ ಕಂಬಗಳು ಮನೆಯ ಮೇಲೆ ಬಿದ್ದಿದೆ. ಮನೆಗಳು ಕುಸಿದು ಬಿದ್ದು ವಾಹನ ಮತ್ತು ಜನರ ಸಂಚಾರ ಅಸ್ತವ್ಯಸ್ತವಾಗಿದೆ.
ತಾಲ್ಲೂಕಿನ ಹಾದನೂರು ಗ್ರಾಪಂ ವ್ಯಾಪ್ತಿಯ ಹಾದನೂರು ಗ್ರಾಮದಲ್ಲಿ ಶುಕ್ರವಾರ ದಂದು ಸಂಜೆ ಸುರಿದ ಗಾಳಿ ಮಳೆಯಿಂದ ರಸ್ತೆ ಹಾಗೂ ಮನೆಯ ಬದಿಯಲ್ಲಿ ಲೈನ್ ಕಂಬಗಳು ಹಾಗೂ ಮರ ಮನೆಯ ಮೇಲೆ ಬಿದ್ದಿವೆ. ಮತ್ತು ಪಕ್ಕದಲ್ಲಿ ಇದ್ದ ಮನೆಯ ಮೇಲೆ ಮರದ ಕೊಂಬೆ ಮುರಿದು ಬಿದ್ದು, ಸಂಪೂರ್ಣ ನೆಲಕಚ್ಚಿದೆ. ಮನೆಯಲ್ಲಿ ಇದ್ದ ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಿರುಗಾಳಿಗೆ ಸರೋಜಾ, ಚಂದ್ರಮ್ಮ, ಕಾಳಮ್ಮ ಎಂಬುವವರ ಮನೆಯ ಮೇಲ್ಛಾವಣಿ ಹಾಗೂ ಗೋಡೆ ಕುಸಿದುಬಿದ್ದಿದೆ.ಕೆಲ್ಲಯ್ಯ ಎಂಬುವರ ಮನೆಯ ಮೇಲೆ ಮರ ಮತ್ತು ಕರೆಂಟ್ ಕಂಬದ ಲೈನ್ ಬಿದ್ದು 20 ಶೀಟುಗಳು ಹಾಗೂ 100 ಕ್ಕೂ ಹೆಚ್ಚು ಹೆಂಚುಗಳು ಹಾರಿ ಹೋಗಿದೆ. ಮೇಲ್ಛಾವಣಿ ಸಂಪೂರ್ಣ ಹಾನಿಯಾಗಿದೆ.

ಇದರ ಕುರಿತು ಹಾದನೂರು ಗ್ರಾಮಸ್ಥರು ಕಂದಾಯ ಇಲಾಖೆ ಅಧಿಕಾರಿಗಳಿಗೆ ಗಮನಕ್ಕೆ ತಂದಿದ್ದರೂ ಕೂಡಾ ಪರಿಶೀಲನೆ ನಡೆಸಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ರಸ್ತೆ ಮತ್ತು ಶಾಲೆಯ ಬಳಿ ಭಾರೀ ಗಾತ್ರದ ಮರ ಮತ್ತು ಕರೆಂಟ್ ಕಂಬಗಳು ರಸ್ತೆಗೆ ಬಿದ್ದ ಪರಿಣಾಮ ಸಂಚಾರಕ್ಕೆ ಅಡಚಣೆಯಾಯಿತು. ನಂತರ ಚೆಸ್ಕಾಂ ಅಭಿಯಂತರ ದೀಪಕ್ ಮತ್ತು ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಚೆಸ್ಕಾಂ ಅಭಿಯಂತರ ದೀಪಕ್ ಮಾತನಾಡಿ, ತಾಲ್ಲೂಕಿನ ಸುಮಾರು ಕಡೆ ಈಗಾಗಲೇ ಗಾಳಿ ಮಳೆಗೆ ಸುಮಾರು 80 ವಿದ್ಯುತ್ ಕಂಬಗಳು ಧರೆಗುಳಿದಿದ್ದು, ಇಲಾಖೆಗೆ ಅಪಾರ ನಷ್ಟ ಉಂಟಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯಜಮಾನರು ಮಹದೇವಸ್ವಾಮಿ, ನಾಗರಾಜು, ಗ್ರಾಪಂ ಉಪಾಧ್ಯಕ್ಷ ಪ್ರಕಾಶ್, ಸದಸ್ಯರು ರಾಜೇಶ್, ಶಿವರಾಜು, ಕೆಂಪಸಿದ್ದ, ಮುಖಂಡರು ಪುಟ್ಟಸ್ವಾಮಿ, ಶಿವಮೂರ್ತಿ, ಸತೀಶ್, ಮಹಾದೇವಯ್ಯ, ಸಿದ್ದರಾಜು, ಇದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


