ತುಮಕೂರು: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ವ್ಯಕ್ತಿಗೆ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ. (ಪೋಕ್ಸೋ) ಜೀವಾವಧಿ(ಸಾಯುವವರೆಗೂ) ಶಿಕ್ಷೆ ಮತ್ತು 1 ಲಕ್ಷದ ಐದು ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.
ಕೊರಟಗೆರೆ ತಾಲೂಕಿನ ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ನೊಂದ ಬಾಲಕಿಯ ತಂದೆ 5 ವರ್ಷಗಳ ಹಿಂದೆ ಮೃತಪಟ್ಟ ಕಾರಣ, ತಾಯಿ, ತಮ್ಮ, ತಂಗಿ ಜೊತೆಗೆ ತನ್ನ ತಾತನ ಮನೆಯಲ್ಲಿ ವಾಸವಿದ್ದಳು.
ಮೇ 2022ರಲ್ಲಿ ಈ ಘಟನೆ ನಡೆದಿದ್ದು, ಶನಿವಾರ ದಿನ ಬಾಲಕಿ ಬಸ್ ಸಿಗದ ಕಾರಣ ಶಾಲೆಗೆ ಹೋಗಲು ಸಾಧ್ಯವಾಗದೇ ಮನೆಯಲ್ಲಿ ಒಬ್ಬಳೇ ಇದ್ದಳು. ಮಧ್ಯಾಹ್ನ ಅಡುಗೆ ಮಾಡಲು ಅಡುಗೆ ಕೋಣೆಗೆ ತೆರಳಿದ್ದ ಸಂದರ್ಭದಲ್ಲಿ ಬಾಲಕಿಗೆ ಸಂಬಂಧದಲ್ಲಿ ತಾತಾನಾಗಬೇಕಾದ ಅಪರಾಧಿ ಶ್ರೀನಿವಾಸ ಎಂಬಾತ ಮನೆಯೊಳಗೆ ಪ್ರವೇಶಿಸಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಈ ವಿಚಾರ ಯಾರಿಗಾದರೂ ತಿಳಿಸಬಾರದು ಎಂದು ಪ್ರಾಣ ಬೆದರಿಕೆ ಹಾಕಿದ್ದ. ನಂತರ ಬಾಲಕಿ ಒಬ್ಬಳೇ ಇದ್ದ ದಿನಗಳಲ್ಲಿ ಹಲವಾರು ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ್ದ.
ಈ ನಡುವೆ ಬಾಲಕಿಯಲ್ಲಿ ಬದಲಾವಣೆಯಾಗಿದ್ದು, ಬಾಲಕಿ ದಪ್ಪವಾಗುತ್ತಿದ್ದರಿಂದ ಗಾಳಿ, ಸೋಂಕು ತಗುಲಿದೆ ಎಂದು ಬಾಲಕಿಯ ತಾಯಿ ಹಾಗೂ ತಾತ ದೇವಸ್ಥಾನಗಳಲ್ಲಿ ಪೂಜೆ ಮಾಡಿದ್ದರು. ಆದರೂ ಬಾಲಕಿ ಗುಣವಾಗದಿದ್ದ ವೇಳೆ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಈ ವೇಳೆ ಬಾಲಕಿ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿತ್ತು. ನಂತರ ಬಾಲಕಿ ಹೆಣ್ಣು ಮಗುವಿಗೆ ಜನ್ಮ ಕೂಡ ನೀಡಿದ್ದಾಳೆ.
ಈ ಪ್ರಕರಣ ಸಂಬಂಧ ತನಿಖೆ ನಡೆಸಿದ ಕೊರಟಗೆರೆ ಸಿಪಿಐ ಸುರೇಶ್ ಕೆ. ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾದ ಸಾಕ್ಷಿಗಳಿಂದ ಶ್ರೀನಿವಾಸ ಅಪರಾಧ ಎಸಗಿರುವುದು ಸಾಬೀತಾಗಿದ್ದು, ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಅಪರಾಧಿಗೆ ಜೀವಾವಧಿ ಶಿಕ್ಷೆ ಮತ್ತು 1 ಲಕ್ಷದ ಐದು ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ಅಲ್ಲದೇ ನೊಂದ ಬಾಲಕಿಗೆ 10 ಲಕ್ಷ ರೂಪಾಯಿಗಳ ಪರಿಹಾರ ಹಾಗೂ ಆರೋಪಿಯ ದಂಡದಲ್ಲಿ 1 ಲಕ್ಷ ರೂಪಾಯಿಗಳನ್ನು ಒಟ್ಟಾರೆಯಾಗಿ 11 ಲಕ್ಷ ರೂಪಾಯಿಗಳ ಪರಿಹಾರ ನೀಡಿ ಆದೇಶಿಸಿದ್ದಾರೆ.
ಇನ್ನೂ ನೊಂದ ಬಾಲಕಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಪರಿಹಾರದ ಮೊತ್ತದಲ್ಲಿ 1.50 ಲಕ್ಷ ರೂಪಾಯಿಗಳನ್ನು ಬಾಲಕಿಯ ಚಿಕಿತ್ಸೆಗಾಗಿ ತಕ್ಷಣ ನೀಡುವಂತೆ ನ್ಯಾಯಾಲಯವು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ತಿಳಿಸಿದೆ.
ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಆಶಾ ಕೆ.ಎಸ್. ವಾದ ಮಂಡಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296