ತುಮಕೂರು: ಹೇಮಾವತಿ ಎಕ್ಸ್’ಪ್ರೆಸ್ ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿ ತುಮಕೂರು, ಜೂನ್ 25ರಂದು ತುಮಕೂರು ಬಂದ್ ಗೆ ಕರೆ ನೀಡಿದ್ದು, ಎಲ್ಲ ತಾಲೂಕು ಕೇಂದ್ರಗಳಲ್ಲಿ ಬಂದ್ ಆಚರಿಸಿ ಪ್ರತಿಭಟನೆ ಮಾಡಲಾಗುವುದು ನಡೆಸಲಾಗುವುದು ಎಂದು ತಿಳಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಸೊಗಡು ಶಿವಣ್ಣ, ಗುಬ್ಬಿ ತಾಲೂಕನ್ನು ಸುತ್ತುವರಿದಂತೆ ಬಂದಿರುವ 100 ಕಿ.ಮೀ. ಚಾನಲ್ ಸುತ್ತಳತೆ ಹೊರತುಪಡಿಸಿ ಡಿ.ರಾಂಪುರದಿಂದ 34.5 ಕಿ.ಮೀ. ಲಿಂಕ್ ಕೆನಾಲ್ ಪೈಪ್‌ಲೈನ್ ಮೂಲಕ ರಾಮನಗರ ಜಿಲ್ಲೆ ಮಾಗಡಿಗೆ ಹೇಮಾವತಿ ನೀರು ತೆಗೆದುಕೊಂಡು ಹೋಗಲು ಸುಮಾರು 1 ಸಾವಿರ ಕೋಟಿ ರೂಪಾಯಿ ಅಂದಾಜು ಮೊತ್ತದ ಕಾಮಗಾರಿಗೆ ಅನುಮೋದನೆ ಪಡೆದುಕೊಂಡು ಕಾಮಗಾರಿಯನ್ನು ಆರಂಭಿಸಿದ್ದಾರೆ. ಈ ಯೋಜನೆ ಅನುಷ್ಠಾನವಾದರೆ ನಮ್ಮ ಜಿಲ್ಲೆಯ ತಿಪಟೂರು, ಗುಬ್ಬಿ, ತುರುವೇಕೆರೆ, ಶಿರಾ, ಮಧುಗಿರಿ, ಕೊರಟಗೆರೆ, ಚಿಕ್ಕನಾಯಕನಹಳ್ಳಿ, ಸಿ.ಎಸ್.ಪುರ, ಸಂಪಿಗೆ, ಬುಗುಡನಹಳ್ಳಿ, ತುಮಕೂರು ನಗರ, ತುಮಕೂರು ಗ್ರಾಮಾಂತರ, ಹೊನ್ನುಡಿಕೆ, ನಾಗವಲ್ಲಿ, ತುಮಕೂರು ಅಮಾನಿಕೆರೆ, ಹೆಣ್ಣೂರು — ಗೂಳೂರು ಏತ ನೀರಾವರಿ ಯೋಜನೆಯ 52 ಕೆರೆಗಳು ಹಾಗೂ ಜಿಲ್ಲೆಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕೆರೆಗಳು ಸೇರಿದಂತೆ ಕೃಷಿ ಚಟುವಟಿಕೆ ಅವಲಂಬಿಸಿರುವ ಜಿಲ್ಲೆಯ ಯಾವುದೇ ಕೆರೆಗೆ ನೀರು ಹರಿಯುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಈ ಯೋಜನೆಯಿಂದ ಮುಂದಿನ ಪೀಳಿಗೆಯ ಜನ ಜಾನುವಾರುಗಳಿಗೆ ಪ್ರಾಣಿ ಪಕ್ಷಿಗಳಿಗೆ ಕುಡಿಯಲು ಸಹ ನೀರು ಸಿಗುವುದಿಲ್ಲ. ಜೊತೆಗೆ ನಮ್ಮ ಜಿಲ್ಲೆಯ ರೈತರು ಜಮೀನುಗಳನ್ನು ಮಾರಾಟ ಮಾಡಿಕೊಂಡು ವಲಸೆ ಹೋಗವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ಈ ಯೋಜನೆ ತುಮಕೂರು ಜಿಲ್ಲೆಗೆ ಮರಣ ಶಾಸನವಾಗಲಿದೆ. ಆದ್ದರಿಂದ ನಾವು ಈಗಲೇ ಎಚ್ಚೆತ್ತುಕೊಂಡು ಹೋರಾಟ ಮಾಡಬೇಕಾದಂತಹ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ ಎಂದರು.
ತುಮಕೂರು ಜಿಲ್ಲೆಯ ಎಲ್ಲಾ ಪೂಜ್ಯ ಮಠಾಧೀಶರುಗಳು, ಪೂಜ್ಯ ಮುಸ್ಲಿಂ ಧರ್ಮ ಗುರುಗಳು, ಪೂಜ್ಯ ಪಾದ್ರಿಗಳು, ನಾಗರೀಕರು, ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ರೈತಪರ ಸಂಘಟನೆಗಳು, ದಲಿತಪರ ಹೋರಾಟ ಸಂಘಟನೆಗಳು, ಚಿನ್ನ ಬೆಳ್ಳಿ ವ್ಯಾಪಾರಸ್ಥರ ಯೂನಿಯನ್, ಜಿಲ್ಲಾ ವಿಶ್ವಕರ್ಮ ವೇದಿಕೆ, ಜಿಲ್ಲಾ ಅರ್ಚಕರ ಸಂಘ, ಕನ್ನಡ ಪರ ಸಂಘಟನೆಗಳು, ವರ್ತಕರ ಸಂಘಗಳು, ಜಿಲ್ಲಾ ಬ್ರಾಹ್ಮಣ ವೇದಿಕೆ, ವಾಲ್ಮೀಕಿ ಯುವ ಸೇನೆ, ವಾಣಿಜ್ಯೋದ್ಯಮಿಗಳ ಅಸೋಸಿಯೇಷನ್ ಸ್ತ್ರೀಶಕ್ತಿ-ಮಹಿಳಾ ಸಂಘಟನೆಗಳು, ವಕೀಲರ ಸಂಘ, ಎಲ್ಲಾ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಶಾಲಾ ಕಾಲೇಜು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು, ಎಲ್ಲಾ ವಿಧವಾದ ವ್ಯಾಪಾರಸ್ಥರು, ಹೋಟೆಲ್ ಮಾಲೀಕರ ಸಂಘ, ವರ್ತಕರ ಸಂಘ ಎ.ಪಿ.ಎಂ.ಸಿ., ಲಾರಿ ಚಾಲಕರ ಅಸೋಸಿಯೇಷನ್ ಆಟೋ ಚಾಲಕರ ಯೂನಿಯನ್, ಖಾಸಗಿ ಬಸ್ ಮಾಲೀಕರ ಸಂಘ, ಬೀದಿ ಬದಿ ವ್ಯಾಪಾರಸ್ಥರುಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ತುಮಕೂರು ಜಿಲ್ಲೆಯ ಹಿತ ಕಾಪಾಡುವ ಎಲ್ಲರೂ ಕೂಡಾ ಜೂನ್ 25ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ತಮ್ಮ ಎಲ್ಲಾ ದೈನಿಂದಿನ ಚಟುವಟಿಕೆಗಳನ್ನು ನಿಲ್ಲಿಸುವುದರ ಮೂಲಕ ‘ತುಮಕೂರು ಜಿಲ್ಲಾ ಬಂದ್’ ಯಶಸ್ಸಿಗೆ ಸಹಕರಿಸಬೇಕೆಂದು ಮನವಿ ಮಾಡಿದ್ದೇವೆ ಎಂದರು.
ತುಮಕೂರು ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳು, ಗ್ರಾಮ ಪಂಚಾಯ್ತಿ ಕೇಂದ್ರ ಸ್ಥಾನಗಳು, ವ್ಯಾಪಾರ ವಹಿವಾಟು ನಡೆಸುವ ಕೇಂದ್ರಗಳು, ತಾಲ್ಲೂಕಿನ ಎಲ್ಲಾ ಶಾಲಾ ಕಾಲೇಜುಗಳು ಸಂಪೂರ್ಣವಾಗಿ ಬಂದ್ ಆಚರಿಸಿ ‘ಹೇಮಾವತಿ ಎಕ್ಸ್‌ಪ್ರೆಸ್ ಅಂಕ್ ಕೆನಾಲ್ ಕಾಮಗಾರಿಯನ್ನು ಹಿಂಪಡೆಯಲು ನಮ್ಮ ಪ್ರತಿಭಟನೆಯ ಕೂಗು ಸರ್ಕಾರಕ್ಕೆ ಮುಟ್ಟುವಂತೆ ನಮ್ಮ ಹೋರಾಟ ಶಾಂತಿಯುತವಾಗಿರಬೇಕು ಈ ನಿಟ್ಟಿನಲ್ಲಿ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳು, ವಾಣಿಜ್ಯ ವ್ಯವಹಾರ, ವಾಹನ ಸಂಚಾರ ಸೇರಿದಂತೆ ಎಲ್ಲವನ್ನೂ ಸ್ವಯಂ ಪ್ರೇರಿತರಾಗಿ ಮುಚ್ಚಿ ಬೆಂಬಲ ನೀಡುವಂತೆ ಕೋರಲಾಗಿದೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA