ತುಮಕೂರು: ಜಿಲ್ಲೆಯಲ್ಲಿ ಜೂನ್ ೧೪ ರಿಂದ ೨೧ರವರೆಗೆ ಎಲ್ಲ ತಾಲೂಕಿನಿಂದ ೨೧೭೬೪ ರೈತರನ್ನು ಮಾತ್ರ ಬೆಳೆ ವಿಮೆಗೆ ನೋಂದಾಯಿಸಲಾಗಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಳ್ಳುವಂತೆ ರೈತರಲ್ಲಿ ಅರಿವು ಮೂಡಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ರಾತ್ರಿ ಜಿಲ್ಲೆಯ ಮಳೆ–ಬೆಳೆ ಪರಿಸ್ಥಿತಿ ಕುರಿತು ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಪ್ರಕೃತಿ ವಿಕೋಪ/ಕೀಟ ಅಥವಾ ರೋಗಬಾಧೆಯಿಂದ ಬೆಳೆ ನಷ್ಟ ಸಂಭವಿಸಿದ ಸಂದರ್ಭದಲ್ಲಿ ವಿಮಾ ಮೊತ್ತ ರೈತರ ಕೈ ಹಿಡಿಯಲಿದ್ದು, ಈ ನಿಟ್ಟಿನಲ್ಲಿ ಬೆಳೆ ವಿಮೆಗೆ ರೈತರ ನೋಂದಣಿ ಮಾಡುವ ಸಂಖ್ಯೆಯನ್ನು ಇನ್ನಷ್ಟು ಚುರುಕುಗೊಳಿಸಬೇಕು ಎಂದು ನಿರ್ದೇಶನ ನೀಡಿದರು.
ಜಂಟಿ ಕೃಷಿ ನಿರ್ದೇಶಕ ರಮೇಶ್ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡುತ್ತಾ ಬೆಳೆ ವಿಮೆಗೆ ನೋಂದಣಿ ಮಾಡಿಸುವ ಬಗ್ಗೆ ಜಿಲ್ಲಾದ್ಯಂತ ಜೂನ್ ೨೪ ರಿಂದ ಗ್ರಾಮ ಪಂಚಾಯತಿ ಮಟ್ಟದಲ್ಲಿ ರೈತರಿಗೆ ತರಬೇತಿ ನೀಡುವ ಮೂಲಕ ಅರಿವು ಮೂಡಿಸಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಪ್ರಾರಂಭವಾಗಿದ್ದು, ಪ್ರಸಕ್ತ ವರ್ಷ ೩೨೦೪೫೫ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಈವರೆಗೆ ೨೬೯೩೬ ಹೆಕ್ಟೇರ್ ಪ್ರದೇಶದಲ್ಲಿ ಅಂದರೆ ಶೇ.೮.೪೧ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ ಎಂದು ತಿಳಿಸಿದರು.
ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ೧೪೨೩ ಹೆಕ್ಟೇರ್(ಶೇ.೩.೯೧), ಗುಬ್ಬಿಯಲ್ಲಿ ೩೦೪ ಹೆ.(ಶೇ.೨.೦೩), ಕುಣಿಗಲ್ ೧೦೧೦ ಹೆ.(ಶೇ.೨.೫೯), ತಿಪಟೂರು ೧೦೮೨ ಹೆ.(ಶೇ.೪.೩೪), ತುಮಕೂರು ೮೩ ಹೆ.(ಶೇ.೦.೪೦), ತುರುವೇಕೆರೆ ೧೨೨೭ ಹೆ.(ಶೇ.೫.೧೮), ಕೊರಟಗೆರೆ ೩೧೧೦ ಹೆ.(ಶೇ.೯.೫೫), ಮಧುಗಿರಿ ೫೦೪೦ ಹೆ.(ಶೇ.೧೬.೧೮), ಪಾವಗಡ ೯೧೯೨ ಹೆ.(ಶೇ.೧೮.೩೪) ಹಾಗೂ ಶಿರಾ ತಾಲ್ಲೂಕಿನಲ್ಲಿ ೪೪೬೫ ಹೆ.(ಶೇ.೯.೫೭) ಸೇರಿ ಒಟ್ಟು ೨೬೯೩೬ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿದೆ. ಎಲ್ಲಾ ತಾಲ್ಲೂಕಿನಲ್ಲಿ ಹೋಲಿಸಿದಾಗ ಪಾವಗಡ ತಾಲ್ಲೂಕಿನಲ್ಲಿ ಅತಿ ಹೆಚ್ಚು ಹಾಗೂ ತುಮಕೂರು ತಾಲೂಕಿನಲ್ಲಿ ಅತೀ ಕಡಿಮೆ ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಈವರೆಗೆ ೪೧೬೦ ಹೆ.ಪ್ರದೇಶದಲ್ಲಿ ಪ್ರಮುಖ ಬೆಳೆಗಳಾದ ರಾಗಿ, ಭತ್ತ, ಜೋಳ ಮುಸುಕಿನಜೋಳ ಹಾಗೂ ಸಿರಿಧಾನ್ಯ; ೭೩೨೮ ಹೆ.ನಲ್ಲಿ ಬೇಳೆಕಾಳು; ೧೨೩೬೮ ಹೆ. ಪ್ರದೇಶದಲ್ಲಿ ಎಣ್ಣೆಕಾಳು ಹಾಗೂ ೩೦೫೦ ಹೆ.ನಲ್ಲಿ ವಾಣಿಜ್ಯ ಬೆಳೆ ಹತ್ತಿಯನ್ನು ಬಿತ್ತನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯ ರೈತರಿಗೆ ರಿಯಾಯತಿ ದರದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆ ಹಾಗೂ ದಾಸ್ತಾನಿನ ಬಗ್ಗೆ ಜಿಲ್ಲಾಧಿಕಾರಿ ಮಾಹಿತಿ ಕೇಳಿದಾಗ ಉತ್ತರಿಸಿದ ಜಂಟಿ ಕೃಷಿ ನಿರ್ದೇಶಕರು ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಈವರೆಗೆ ೬೨೬೭.೮೪ ಕ್ವಿಂಟಾಲ್ ಬಿತ್ತನೆ ಬೀಜ ವಿತರಣೆ ಮಾಡಲಾಗಿದ್ದು, ೫೨೯೨.೫೩ ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ಯೂರಿಯಾ, ಡಿಎಪಿ, ಎಂಓಪಿ, ಎನ್‌ಪಿಕೆ ಕಾಂಪ್ಲೆಕ್ಸ್ ಸೇರಿ ೨೦೨೫೬ ಮೆ.ಟನ್ ರಸಗೊಬ್ಬರ ವಿತರಣೆ ಮಾಡಿದ್ದು, ೩೭೬೨೭ ಮೆ.ಟನ್ ರಸಗೊಬ್ಬರ ದಾಸ್ತಾನು ಮಾಡಲಾಗಿದೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಜನವರಿ ೧ ರಿಂದ ಜೂನ್ ೨೧ರವರೆಗೆ ೧೭೪.೭೦ ಮಿ.ಮೀ. ವಾಡಿಕೆ ಮಳೆಯಿದ್ದು, ೨೯೮.೫೦ ಮಿ.ಮೀ. ವಾಸ್ತವ ಮಳೆಯಾಗಿದೆ. ವಾಡಿಕೆಗಿಂತ ಅಧಿಕ ಮಳೆಯಾಗಿರುವುದರಿಂದ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ ಎಂದು ಸಭೆಗೆ ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು, ಉಪವಿಭಾಗಾಧಿಕಾರಿಗಳಾದ ಸಪ್ತಶ್ರೀ, ಗೋಟೂರು ಶಿವಪ್ಪ ಸೇರಿ ಮತ್ತಿತರರ ಅಧಿಕಾರಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA