ರಾಜಧಾನಿ ಬೆಂಗಳೂರಿನಲ್ಲಿ ಡೆಂಗ್ಯೂಗೆ ಇಬ್ಬರು ಬಲಿಯಾಗಿದ್ದಾರೆ. ಈವರೆಗೂ ರಾಜ್ಯದಲ್ಲಿ ಡೆಂಗ್ಯೂಗೆ ಒಟ್ಟು 7 ಜನ ಬಲಿಯಾಗಿದ್ದು ಈಗ ಬೆಂಗಳೂರಿನಲ್ಲಿ 27 ವರ್ಷದ ಯುವಕ ಹಾಗೂ 80 ವರ್ಷದ ವೃದ್ಧೆ ಮೃತಪಟ್ಟಿದ್ದಾರೆ.
ಈ ಎರಡೂ ಪ್ರಕರಣಗಳು ಬಿಬಿಎಂಪಿಯ ಪೂರ್ವ ವಲಯದಲ್ಲಿ ದಾಖಲಾಗಿವೆ. ಜ್ವರದಿಂದ ಬಳಲುತ್ತಿದ್ದ ಸಿ.ವಿ. ರಾಮನ್ ನಗರದ ವಾಸಿ ಅಭಿಲಾಷ್ (27) ಜೂನ್ 25 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಅವರಿಗೆ ಡೆಂಗ್ಯೂ ಸೋಂಕು ಇರುವುದು ದೃಢಪಟ್ಟಿತ್ತು.
ಚಿಕಿತ್ಸೆ ಫಲಕಾರಿಯಾಗದೇ ಜೂನ್ 27 ರಂದು ಅಭಿಲಾಷ್ ಮೃತಪಟ್ಟರು. ಇನ್ನೊಂದು ಪ್ರಕರಣದಲ್ಲಿ ತಮಿಳುನಾಡಿನ ಮೂಲದ ನೀರಜಾದೇವಿ (80) ಡೆಂಗ್ಯೂಗೆ ಬಲಿಯಾಗಿದ್ದಾರೆ. ಇವರು ಸ್ತನ ಕ್ಯಾನ್ಸರ್ ಚಿಕಿತ್ಸೆಗಾಗಿ ಬೆಂಗಳೂರಿಗೆ ಬಂದಿದ್ದರು. ಜೂನ್ 20 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಈ ವೇಳೆ ಇವರಿಗೂ ಡೆಂಗ್ಯೂ ಇರುವುದು ತಿಳಿದು ಬಂದಿತ್ತು. ಇವರಿಗೆ ಚಿಕಿತ್ಸೆ ನೀಡಲಾಗಿತ್ತಾದರೂ ಫಲಕಾರಿಯಾಗದೇ ಜೂನ್ 23ರಂದು ಮೃತಪಟ್ಟರು.
ರಾಜ್ಯದಲ್ಲಿ ಈವರೆಗೆ ಒಟ್ಟು 5,749 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಬಿಬಿಎಂಪಿ ಹೊರತು ಪಡಿಸಿ ರಾಜ್ಯದಲ್ಲಿ 4,364 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ಬೆಂಗಳೂರಿನಲ್ಲಿ ಹತೋಟಿಗೆ ಸಿಗದೇ ಮುನ್ನುಗುತ್ತಿರುವ ಡೆಂಗ್ಯೂ ಪ್ರಕರಣಗಳಿಂದಾಗಿ ಸಿಲಿಕಾನ್ ಸಿಟಿ ಮಂದಿ ಆತಂಕಕ್ಕೊಳಗಾಗಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲೇ ಕಳೆದ 2023ರಲ್ಲಿ ಜನವರಿಯಿಂದ ಜೂನ್ ವರೆಗೆ ಒಟ್ಟು 732 ಪ್ರಕರಣಗಳು ದಾಖಲಾಗಿದ್ದವು. ಆದರೆ ಈ ಬಾರಿ 1385 ಪ್ರಕರಣಗಳು ವರದಿಯಾಗಿವೆ. ಕಳೆದ ಬಾರಿಗಿಂತ ದುಪ್ಪಟ್ಟಾಗಿರುವ ಡೆಂಗ್ಯೂ ಪ್ರಕರಣಗಳು ಆರೋಗ್ಯ ಇಲಾಖೆಗೆ ತಲೆನೋವಾಗಿದೆ.
ಇನ್ನುರಾಜ್ಯದಲ್ಲಿ ಈವರೆಗೂ ಡೆಂಗ್ಯೂ ಒಟ್ಟು 5 ಬಲಿಯಾಗಿದ್ದಾರೆ. ಡೆಂಗ್ಯೂ ಜೊತೆ ಚಿಕನ್‌ಗುನ್ಯಾಹೆಚ್ಚಾಗುವ ಭೀತಿಯೂ ಕಾಡುತ್ತಿದೆ. ರಾಜ್ಯದಲ್ಲಿ ಈವರೆಗೂ ಒಟ್ಟು 897 ಚಿಕನ್ ಗುನ್ಯಾ ಪ್ರಕರಣಗಳು ವರದಿಯಾಗಿರುವುದೂ ಬೆಳಕಿಗೆ ಬಂದಿರುವುದು ಆತಂಕ ಹೆಚ್ಚಳಕ್ಕೆ ಕಾರಣವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA