ತುಮಕೂರು: ಅನ್ನ, ಅಕ್ಷರ, ವಸತಿ ಉಚಿತವಾಗಿ ಕಲ್ಪಿಸುವ ಮೂಲಕ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವ ತ್ರಿವಿಧ ದಾಸೋಹದ ಕ್ಷೇತ್ರವಾಗಿರುವ ಸಿದ್ದಗಂಗಾ ಮಠದಲ್ಲಿರುವ ಸ್ಮೃತಿ ವನ ಪ್ರಸ್ತುತ ಪ್ರವಾಸಿಗರು ಹಾಗೂ ಶ್ರೀ ಶಿವಕುಮಾರ ಸ್ವಾಮೀಜಿಯವರ ಭಕ್ತ ಸಮೂಹದ ಕೇಂದ್ರಬಿಂದುವಾಗಿ ಗೋಚರಿಸುತ್ತಿದೆ.
ಹೌದು, ಶತಾಯುಷಿ ಶ್ರೀ ಶಿವಕುಮಾರ ಸ್ವಾಮೀಜಿಯವರ ಆದರ್ಶ ಜೀವನದ ಕುರಿತ ಸಂಪೂರ್ಣ ಚರಿತ್ರೆಯನ್ನು ಮನಮುಟ್ಟುವಂತೆ ಶಿಲ್ಪಕಲಾ ಕೃತಿಗಳ ಮೂಲಕ ಅನಾವರಣಗೊಳಿಸಲಾಗಿದೆ.
ಶ್ರೀ ಶಿವಕುಮಾರ ಸ್ವಾಮೀಜಿಯವರ ಹುಟ್ಟಿನಿಂದ ಹಿಡಿದು ಸಮಾಜದ ಅನನ್ಯ ಸೇವೆ ಸಲ್ಲಿಸುವಂತಹ ಅನೇಕ ಸಂಗತಿಗಳನ್ನು ಕಲಾಕೃತಿಗಳ ಮೂಲಕ ಕಟ್ಟಿಕೊಡಲಾಗಿದೆ.
ಶ್ರೀ ಶಿವಕುಮಾರ ಸ್ವಾಮೀಜಿಯವರ ಬಾಲ್ಯಾವಸ್ಥೆ, ಪ್ರೌಢಾವಸ್ಥೆ, ದೀಕ್ಷೆ ಪಡೆದ ಕ್ಷಣ ಹಾಗೂ ಸಿದ್ದಗಂಗಾ ಮಠಕ್ಕೆ ಸ್ವಾಮೀಜಿಯಾಗಿ ಅಧಿಕಾರ ಸ್ವೀಕರಿಸಿದ ಕ್ಷಣಗಳು ವ್ಯವಸ್ಥಿತವಾಗಿ ಕಲಾಕೃತಿಗಳ ಮೂಲಕ ಮೂಡಿ ಬಂದಿದೆ.
ಶ್ರೀ ಶಿವಕುಮಾರ ಸ್ವಾಮೀಜಿಯವರು ಮಠದಲ್ಲಿ ಪ್ರಾರಂಭದ ವೇಳೆ ಸೌದೆಗಳನ್ನು ಸ್ವತಃ ಒಡೆದು ಮಕ್ಕಳಿಗೆ ಶಿಕ್ಷಣದ ಜೊತೆಗೆ ಕಾಯಕದ ಮಹತ್ವವನ್ನು ಕೂಡ ಸಾರಿರುವುದನ್ನು ಇಲ್ಲಿನ ಕಲಾಕೃತಿಗಳಲ್ಲಿ ನಾವು ಕಾಣಬಹುದಾಗಿದೆ.
ಇದಲ್ಲದೆ ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರೊಂದಿಗಿನ ಮಾತುಕತೆಯ ಕ್ಷಣಗಳನ್ನು ಸಹ ಇಲ್ಲಿ ಚಿತ್ರಿಸಲಾಗಿದೆ. ಇನ್ನು ಶ್ರೀ ಶಿವಕುಮಾರ ಸ್ವಾಮೀಜಿಯವರ ಶಾಸ್ತ್ರೋಕ್ತವಾದ ಪೂಜೆ ಪುನಸ್ಕಾರಗಳು ಸಹ ಹೀಗೆ ನಡೆಯುತ್ತಿದ್ದವು ಎಂಬುದನ್ನು ತೋರಿಸಲಾಗಿದೆ.
ಅಲ್ಲದೆ ಶ್ರೀ ಶಿವಕುಮಾರ ಸ್ವಾಮೀಜಿಯವರು ಸಹ ಪ್ರಾಣಿಗಳನ್ನು ಎಷ್ಟು ಅನ್ಯೋನ್ಯತೆಯಿಂದ ಕಾಣುತ್ತಿದ್ದರು ಎಂಬುದನ್ನು ಕೂಡ ಇಲ್ಲಿ ಬಿತ್ತರಿಸಲಾಗಿದೆ.
ಭಕ್ತರು ಹೇಗೆ ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಸಿದ್ದಗಂಗಾ ಮಠದಲ್ಲಿ ಶಿಕ್ಷಣವನ್ನು ಕೊಡಿಸುವ ಕ್ಷಣಗಳು ಕಲಾಕೃತಿಗಳಲ್ಲಿ ಅತಿ ಸುಂದರವಾಗಿ ಮೂಡಿಬಂದಿದೆ.
ಪ್ರಸ್ತುತ ಸ್ಮೃತಿ ವನ ಪ್ರವಾಸಿಗರು ಹಾಗೂ ಸಿದ್ದಗಂಗಾ ಮಠದ ಭಕ್ತರ ಕೇಂದ್ರವಾಗಿ ಪರಿವರ್ತನೆಗೊಂಡಿದೆ ಎಂದೆ ಹೇಳಬಹುದಾಗಿದೆ. ವನಕ್ಕೆ ಭೇಟಿ ನೀಡುತ್ತಿರುವ ಭಕ್ತರು ಶ್ರೀ ಶಿವಕುಮಾರ ಸ್ವಾಮೀಜಿಯವರ ಜೀವನ ಸಾಧನೆಗಳನ್ನು ಕಂಡು ಧನ್ಯತಾಭಾವ ವ್ಯಕ್ತಪಡಿಸುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA