ಕನ್ನಡದ ಖ್ಯಾತ ಹಿರಿಯ ರಂಗಕರ್ಮಿ, ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಸದಾನಂದ ಸುವರ್ಣ ಅವರು ಇಂದು ವಿಧಿವಶರಾಗಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾಗಿದ್ದಾರೆ.
ನಾಳೆ ಪುರಭವನದಲ್ಲಿ ಮಧ್ಯಾಹ್ನ 1 ರಿಂದ 3 ಗಂಟೆ ತನಕ ಮೃತರ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಬಳಿಕ ಅವರಿಚ್ಛೆಯಂತೆ ದೇಹದಾನ ಮಾಡಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಸದಾನಂದ ಸುವರ್ಣರು ನಿರ್ಮಿಸಿದ್ದ ”ಘಟಶ್ರಾದ್ಧ” ಚಿತ್ರ ಮತ್ತು ನಿರ್ದೇಶಿಸಿದ್ದ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ”ಕುಬಿ ಮತ್ತು ಇಯಾಲ” ಕತೆಯನ್ನಾಧರಿಸಿದ ಚಿತ್ರಗಳೆರಡೂ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳಿಗೆ ಭಾಜನವಾಗಿವೆ.ನೂರಾರು ಕನ್ನಡ ಮತ್ತು ತುಳು ನಾಟಕಗಳನ್ನು ನಿರ್ದೇಶಿಸಿದ್ದ ಸುವರ್ಣರ ರಂಗಗರಡಿಯಿಂದ ಬಂದಿರುವ ಹಲವಾರು ಪ್ರತಿಭಾವಂತ ನಟ-ನಟಿಯರು ಕಲಾಜಗತ್ತಿನಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.
ಸಾಹಿತ್ಯದಲ್ಲೂ ಆಸಕ್ತಿ ಹೊಂದಿದ್ದ ಅವರು ಸಣ್ಣ ಕತೆ, ಕಾದಂಬರಿಗಳನ್ನು ಕೂಡ ಬರೆದಿದ್ದಾರೆ. ತಬರನ ಕತೆ, ಮನೆ, ಕ್ರೌರ್ಯ ಚಿತ್ರಗಳ ನಿರ್ವಾಹಕ ನಿರ್ಮಾಪಕರು. ಈ ಸಿನೆಮಾಗಳಿಗೆ ರಾಷ್ಟ್ರ ಪ್ರಶಸ್ತಿ ಬಂದಿದೆ. 1989ರಲ್ಲಿ ತೇಜಸ್ವಿ ಅವರ ಸಣ್ಣ ಕತೆ ಆಧರಿತ ಕುಬಿ ಹಾಗೂ ಇಯಾಲ ಚಿತ್ರ ಅವರ ನಿರ್ದೇಶನದ ಮೊದಲ ಸಿನೆಮಾ.
ಗುಡ್ಡದ ಭೂತ ಅವರ ನಿರ್ದೇಶನದ ಜನಪ್ರಿಯ ಕಿರುತೆರೆಯ ಧಾರವಾಹಿ. ಶಿವರಾಮ ಕಾರಂತ, ಶ್ರೀ ನಾರಾಯಣ ಗುರು, ತುಳುನಾಡು ಒಂದು ಇಣುಕುನೋಟ ಎಂಬ ಸಾಕ್ಷ್ಯಚಿತ್ರ ನಿರ್ದೇಶಿಸಿದ್ದರು.
ಈ ಬಗ್ಗೆ ಸಂತಾಪ ಸೂಚಿಸಿರುವಂತ ಸಿಎಂ ಸಿದ್ಧರಾಮಯ್ಯ ಅವರು, ಹಿರಿಯ ರಂಗಕರ್ಮಿ, ಚಲನಚಿತ್ರ ನಿರ್ದೇಶಕ- ನಿರ್ಮಾಪಕ ಸದಾನಂದ ಸುವರ್ಣರ ನಿಧನದ ಸುದ್ದಿ ಕೇಳಿ ದು:ಖವಾಯಿತು ಅಂತ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


