ಸರಗೂರು: ಸ್ವಾಧೀನನುಭವದಲ್ಲಿರುವ ಜಮೀನಿಗೆ ರೈತರು ಸರ್ಕಾರದ ಆದೇಶದಂತೆ ನಮೂನೆ 50, 53, 57 ನೇ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಸಾಗುವಳಿ ಚೀಟಿ ವಿತರಿಸುವಂತೆ ಒತ್ತಾಯ ಮಾಡುತ್ತಾ ಬಂದಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಸಾಗುವಳಿ ಪತ್ರ ನೀಡುತ್ತಿಲ್ಲ ಎಂದು ಹಾದನೂರು ಗ್ರಾ.ಪಂ. ಸದಸ್ಯ ಹಾಗೂ ಕರ್ನಾಟಕ ಭೂ ಹಕ್ಕುದಾರರ ವೇದಿಕೆ ಸದಸ್ಯ ಯಶವಂತಪುರ ಶಿವಲಿಂಗಯ್ಯ ಆಗ್ರಹಿಸಿದರು.
ತಾಲ್ಲೂಕಿನ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ದಂದು ಕರ್ನಾಟಕ ಭೂ ಹಕ್ಕುದಾರರ ವೇದಿಕೆ ವತಿಯಿಂದ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಂಘಟನೆಯು ಕಳೆದ 10 ವರ್ಷಗಳಿಂದ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸುವಂತೆ ಹೋರಾಟ ನಡೆಸುತ್ತಾ ಬಂದಿದೆ. ಕಳೆದ 50 ಮತ್ತು 60 ವರ್ಷಗಳಿಂದ ರೈತರು ಭೂಮಿಯನ್ನು ಉಳುಮೆ ಮಾಡಿಕೊಂಡು ಬಂದರು ಸಹ ಕಂದಾಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾಗುವಳಿ ಚೀಟಿ ವಿತರಣೆ ಮಾಡದೇ ಹಿಂದೇಟು ಹಾಕುತ್ತಿದ್ದಾರೆ ಎಂದರು.
ಸಾಗುವಳಿ ಚೀಟಿ ಸಿಗದೆ ಇರುವುದರಿಂದ ಪ್ರಕೃತಿ ವಿಕೋಪದಿಂದ ಕಾಡುಪ್ರಾಣಿಗಳಿಂದ ಬೆಳೆ ನಷ್ಟವಾದಾಗ, ಪರಿಹಾರ ಪಡೆಯಲು ಸಾಧ್ಯವಾಗದೆ ಬೆಳೆದ ಬೆಳೆಗೆ ಸೂಕ್ತ ಬೆಲೆಯನ್ನು ಪಡೆಯಲಾಗದೆ ನೊಂದಿರುವ ಸಾವಿರಾರು ಬಗರ್ ಹುಕುಂ ಸಾಗವಳಿ ಮಾಡುತ್ತಾ ಸ್ವಾಧೀನದಲ್ಲಿರುವ ರೈತರು ನಮ್ಮ ವೇದಿಕೆಯ ಜೊತೆಗೂಡಿ ಪಾದಯಾತ್ರೆ, ಪ್ರತಿಭಟನಾ ಧರಣಿ, ಹೀಗೆ ಹಲವು ಹೋರಾಟ ಮಾಡಲಾಗಿದೆ . ನಂತರದ ದಿನಗಳಲ್ಲಿ ಕಂದಾಯ ಸಚಿವರಾಗಿದ್ದ ಕಾಗೂಡು ತಿಮ್ಮಪ್ಪರವರ ಅಧಿಕಾರ ವಹಿಸಿಕೊಂಡ ನಂತರ ಒಂದಷ್ಟು ಸಕಾರಾತ್ಮಕ ಸ್ಪಂದನೆ ದೊರೆತಿದ್ದು ನಂತರದ ದಿನಗಳಲ್ಲಿ ಇನ್ನೂ ಸಾಕಷ್ಟು ಅರ್ಜಿಗಳು ಬಾಕಿ ಉಳಿದಿರುತ್ತವೆ. ಪ್ರಸ್ತುತ ಸರ್ಕಾರದಲ್ಲಿ ಕಂದಾಯ ಸಚಿವರಾಗಿರುವ ಕೃಷ್ಣಭೈರೇಗೌಡರವರು ರೈತ ಪರವಾಗಿ ಕ್ರಿಯಾಶೀಲರಾಗಿದ್ದು ಜವಾಬ್ದಾರಿಯುತವಾಗಿ ಈ ವಿಚಾರವಾಗಿ ಸಹಕರಿಸುತ್ತಿರುವುದನ್ನು ನಮ್ಮ ಸಂಘಟನೆಯು ಅಭಿನಂದಿಸುತ್ತದೆ ಎಂದರು.
ಹಾಗೆಯೇ ಹೆಗ್ಗಡದೇವನಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಅನಿಲ್ ಚಿಕ್ಕಮಾದುರವರು ಕಳೆದ ಬಾರಿ ಶಾಸಕರಾಗಿದ್ದಾಗ ಹಲವು ರೈತರಿಗೆ ಹಕ್ಕುಪತ್ರ ವಿತರಿಸಿರುವುದನ್ನು ಸಹ ನಮ್ಮ ವೇದಿಕೆಯು ಸ್ವಾಗತಿಸುತ್ತದೆ. ಶಾಸಕರಾದ ಅನಿಲ್ ಚಿಕ್ಕಮಾದು ರವರು ಈ ಬಾರಿಯು ಸಹ ರೈತರ ಪರವಾಗಿ ಗಮನಹರಿಸಿ ಹೆಚ್ಚು ರೈತರಿಗೆ ಹಕ್ಕುಪತ್ರ ವಿತರಿಸಲು ಮುಂದಾಗುತ್ತಾರೆ ಎಂಬ ಆಶಯದಿಂದ ಬದುಕುತ್ತಿದ್ದೇವೆ. ಈಗಾಗಲೇ ಭೂ ಮಂಜೂರಾತಿ ಸಮಿತಿಯು ಸಭೆಯಲ್ಲಿ ಅನುಮೋದಿಸಿ ರೈತರಿಗೆ ಹಕ್ಕುಪತ್ರ ವಿತರಿಸುವಂತೆ ಆದೇಶ ಮಾಡಿ ಶಾಸಕರು ಮತ್ತು ಭೂ ಮಂಜೂರಾತಿ ಸಮಿತಿಯ ಸದಸ್ಯರು ಸಹಿ ಮಾಡಿದ್ದರು ಸಹ ಕಂದಾಯ ಇಲಾಖೆ ತಹಸೀಲ್ದಾರ್ ಅಧಿಕಾರಿಗಳು ರೈತರನ್ನು ನಿರ್ಲಕ್ಷಿಸಿ ಹಕ್ಕುಪತ್ರ ವಿತರಿಸದೆ ಸತಾಯಿಸುತ್ತಿದ್ದಾರೆ. ಇದರಿಂದ ರೈತರು ಭಯಭೀತರಾಗಿದ್ದು ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂದರು.
ರೈತರು ತಹಸೀಲ್ದಾರ್ ಕಚೇರಿಗೆ ಹೋದರೆ ಸಾಗುವಳಿ ಪತ್ರ ಬಗ್ಗೆ ವಿಚಾರಿಸಿದರೆ ಸಿಬ್ಬಂದಿ ನೂರುಲ್ಲಾ ಅಹಮದ್ ಎಂಬುವನು ರೈತರನ್ನು ಅದು ಇದು ಅಂತ ಹೇಳಿ ರೈತರು ಮತ್ತು ಸಾರ್ವಜನಿಕರನ್ನು ಅಲೆದಾಡುಸುತ್ತಿದ್ದಾರೆ. ರೈತರಿಗೆ ಯಾವುದೇ ಅನಾಹುತ ಸಂಭವಿಸುವ ಮುನ್ನಾ ಎಚ್ಚೆತ್ತುಕೊಂಡು ರೈತರಿಗೆ ಹಕ್ಕುಪತ್ರ ವಿತರಿಸಲು ಮುಂದಾಗಬೇಕು ಎಂದರು.
ಬಾಕಿ ಉಳಿದಿರುವ ಅರ್ಜಿಗಳ ವಿಲೇವಾರಿ ಮಾಡಲು ಅರ್ಜಿ ಸಲ್ಲಿಸಿರುವ ರೈತರ ಜಮೀನುಗಳಿಗೆ ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲಿಸಿ ಅರ್ಹ ರೈತರುಗಳ ಕಡತಗಳನ್ನು ತಯಾರು ಮಾಡಿ ಭೂ ಮಂಜೂರಾತಿ ಸಮಿತಿಗೆ ವಹಿಸಬೇಕೆಂದು ವೇದಿಕೆಯ ಸಮಿತಿಯ ಇಲ್ಲ ಅಂದ ಕಾಲದಲ್ಲಿ ತಾಲ್ಲೂಕು ಮತ್ತು ಜಿಲ್ಲಾಧಿಕಾರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ವೇದಿಕೆ ಸದಸ್ಯರು ನಾಗೇಶ್, ಮಲ್ಲರಾಜು, ನಾಗರಾಜಚಾರ್, ಕಾಳಸ್ವಾಮಿ, ಶಿವಪ್ಪ, ಗಣೇಶ್, ಗೋಪಾಲರಾಜ್, ಶಿವರಾಜ್ ಇತರರು ಹಾಜರಾಗಿ ಒತ್ತಾಯಿಸಿದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


