ಬೀದರ: ಜಿಲ್ಲಾ ಔರಾದ ತಾಲೂಕಿನ ಕೊಳ್ಳುರ ಗ್ರಾಮದಲ್ಲಿ ಅನೈರ್ಮಲ್ಯದ ಪರಿಣಾಮ ಸಾರ್ವಜನಿಕರು ಸಾಂಕ್ರಾಮಿಕ ರೋಗದ ಭೀತಿಯನ್ನು ಎದುರಿಸುತ್ತಿದ್ದಾರೆ.
ಕಾಲಿಟ್ಟ ಕಡೆ ಗಲೀಜು, ಅಸ್ವಚ್ಛತೆ, ಎಲ್ಲೆಡೆ ಹರಿಯುತ್ತಿರುವ ದುರ್ವಾಸನೆಯುಕ್ತ ಮಲೀನ ನೀರಿನಿಂದಾಗಿ ಮಿತಿಮೀರಿದ ಸೊಳ್ಳೆಗಳ ಕಾಟ ಆರಂಭವಾಗಿದೆ. ನಿತ್ಯ ಅಪಾಯಕಾರಿ ಸ್ಥಿತಿಯಲ್ಲಿ ಇಲ್ಲಿನ ಸ್ಥಳೀಯರು ಓಡಾಟ ನಡೆಸುವಂತಾಗಿದೆ. ಇದೆಲ್ಲ ಗೊತ್ತಿದ್ದರೂ, ಅಧಿಕಾರಿಗಳು ಕಣ್ಣುಮುಚ್ಚಿಕುಳಿತಿದ್ದಾರೆ.
ಎಕಲಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳ್ಳುರ ಗ್ರಾಮದ ಹಳ್ಳಿಯಲ್ಲಿ ಜನರು ಡೆಂಗ್ಯೂ, ಮಲೇರಿಯಾ, ಚಿಕೂನ್ ಗುನ್ಯಾ ಸೇರಿ ಸಾಂಕ್ರಾಮಿಕ ರೋಗದ ಭೀತಿ ಎದುರಿಸುತ್ತಿದ್ದಾರೆ.
ಮನೆಗಳಿಂದ ಹೊರಬರುವ ಕೊಳಚೆ ನೀರು ರಸ್ತೆಗಳಲ್ಲಿ ಹರಿದು ದುರ್ವಾಸನೆ ಬೀರುತ್ತಿದೆ. ಇದರಿಂದ ಮಹಿಳೆಯರು, ಮಕ್ಕಳು ಸೇರಿದಂತೆ ಸಾರ್ವಜನಿಕರು ಸಂಕಷ್ಟಕ್ಕೀಡಾಗಿದ್ದಾರೆ.
ಕೊಳ್ಳುರ ಗ್ರಾಮದಲ್ಲಿ ಸರಿಯಾದ ಚರಂಡಿ ಇಲ್ಲದ ಕಾರಣ ಮುಖ್ಯ ರಸ್ತೆಗೆ ಕೊಳಚೆ ನೀರು ಹರಿಯುತ್ತಿದೆ. ಈ ದೃಶ್ಯಗಳು ಈ ಹಳ್ಳಿ ಸಮಸ್ಯೆಗಳನ್ನು ಹೊತ್ತು ಮಲಗಿದಂತೆ ಕಂಡು ಬರುತ್ತಿದೆ. ಊರಿನ ಪ್ರತಿಯೊಂದು ಓಣಿಗಳ ಹಾಲತ್ ಖರಾಬ್ ಆಗಿದ್ದರೂ ಸಂಬಂಧಿತ ಅಧಿಕಾರಿಗಳು ಮಾತ್ರ ತಮಗೂ ಇದಕ್ಕೂ ಸಂಬಂಧ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ.
ಹಲವು ಬಾರಿ ಗ್ರಾ.ಪಂ. ಅಧಿಕಾರಿಗಳಿಗೆ ಮೌಖಿಕ ಭೇಟಿಯಾಗಿ ಚರಂಡಿ ವ್ಯವಸ್ಥೆ ಮಾಡಿಕೊಡಿ ಎಂದು ಅಂಗಲಾಚಿದರೂ ಸ್ಪಂದನೆ ಸಿಕ್ಕಿಲ್ಲ. ಊರಿನ ಯಾವ ಕಡೆಯೂ ಸ್ವಚ್ಛತೆ ಕಾಣಸಿಗದು. ಚರಂಡಿ ಇರದ ಕಾರಣ ಮನೆಗಳ ಹೊಲಸು ನೀರು ರಸ್ತೆಯಲ್ಲಿ ಹರಿದಾಡುತ್ತಿದ್ದು, ಸಾಂಕ್ರಾಮಿಕ ರೋಗ ಭೀತಿಯಲ್ಲಿ ಜನ ದಿನದೂಡುತ್ತಿದ್ದಾರೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


