ತುಮಕೂರು: ಜಿಲ್ಲಾಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸೇರಿದಂತೆ ಜಿಲ್ಲೆಯಲ್ಲಿರುವ ಎಲ್ಲಾ ತಾಲೂಕು ಸಾರ್ವಜನಿಕ ಆಸ್ಪತ್ರೆಗಳು ಸೆಪ್ಟೆಂಬರ್ ಮಾಹೆಯ ಅಂತ್ಯದೊಳಗಾಗಿ ರಾಷ್ಟ್ರೀಯ ಗುಣಮಟ್ಟ ಭರವಸೆ(NQAS – National Quality Assurance Standards) ಪ್ರಮಾಣೀಕರಣ ಹೊಂದಿರಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿಂದು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲಾಸ್ಪತ್ರೆಯು 2000 ರಿಂದ ಈವರೆಗೂ NQAS ಪ್ರಮಾಣೀಕರಣ ಹೊಂದಿರುವುದಿಲ್ಲ. ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಡೆಂಗ್ಯೂ ಪ್ರಕರಣಗಳನ್ನು ನಿಯಂತ್ರಿಸಲು ಜಿಲ್ಲೆಯಲ್ಲಿರುವ ಎಲ್ಲ ಆಸ್ಪತ್ರೆಗಳು NQAS ಪ್ರಮಾಣೀಕರಣ ಹೊಂದಿರುವುದು ಕಡ್ಡಾಯ. ಇತ್ತೀಚೆಗೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭದಲ್ಲಿ ಸೊಳ್ಳೆಗಳಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ರೋಗಿಗಳ ಆರೋಗ್ಯ ಹಿತ ದೃಷ್ಟಿಯಿಂದ NQAS ಪ್ರಮಾಣೀಕರಣ ಹೊಂದುವುದು ಅಗತ್ಯವೆಂದು ತಿಳಿಸಿದರು.
ಸಾರ್ವಜನಿಕ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ರಾಷ್ಟ್ರೀಯ ಗುಣಮಟ್ಟ ಭರವಸೆ ಮಾನದಂಡಗಳನ್ನು ಪಾಲಿಸಬೇಕು. ನ್ಯೂನ್ಯತೆಗಳಿದ್ದಲ್ಲಿ ಕೂಡಲೇ ಸರಿಪಡಿಸಲು ಕ್ರಮಕೈಗೊಂಡು ವರದಿ ನೀಡಬೇಕು. ಆಸ್ಪತ್ರೆಯಲ್ಲಿರುವ ವೈದ್ಯಕೀಯ ಸಲಕರಣೆಗಳು ಸುಸ್ಥಿತಿಯಲ್ಲಿರಬೇಕು. ಅನುದಾನ ಲಭ್ಯವಿಲ್ಲವೆಂದು ಯಾವುದೇ ಆಸ್ಪತ್ರೆಗಳಿಂದ ನೆಪ ಕೇಳಿ ಬಂದರೆ ಹಿಂದಿನ ವರ್ಷಗಳ ಖರ್ಚು–ವೆಚ್ಚಗಳನ್ನು ತನಿಖೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಗರಕ್ಕೆ ಪ್ರವೇಶಿಸಿದ ಹೇಮಾವತಿ:
ಸಭೆಯ ನಂತರ ಪತ್ರಿಕಾ ಹೇಳಿಕೆ ನೀಡಿದ ಜಿಲ್ಲಾಧಿಕಾರಿ, ಹೇಮಾವತಿ ಯೋಜನೆ ವ್ಯಾಪ್ತಿಯ ಜಿಲ್ಲೆ ನಾಲೆಗಳಿಗೆ ಈಗಾಗಲೇ ನೀರು ಹರಿಯುತ್ತಿದ್ದು, ತುಮಕೂರು ನಗರಕ್ಕೆ ಇಂದು ಬೆಳಿಗ್ಗೆ 9 ಗಂಟೆಗೆ ಪ್ರವೇಶಿಸಿದೆ. ಪ್ರಸ್ತುತ ಕಡಿಮೆ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಯಾವುದೇ ಸಮಯದಲ್ಲಿ ನೀರಿನ ಒಳಹರಿವು ಹೆಚ್ಚಳವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಶಾಲಾ ಮಕ್ಕಳ ಮೇಲೆ ಪೋಷಕರು ನಿಗಾವಹಿಸಬೇಕು. ಶಾಲೆ ಬಿಟ್ಟ ತಕ್ಷಣ ಮನೆ ಸೇರಬೇಕು. ನಾಲೆ ನೀರಿನಲ್ಲಿ ಈಜಲು ಹೋಗಬಾರದು. ನಾಲೆಯ ಬಳಿ ಸುಳಿದಾಡದಂತೆ ಎಚ್ಚರಿಕೆ ವಹಿಸಬೇಕೆಂದು ಶಾಲಾ ಮಕ್ಕಳಿಗೆ ತಿಳಿಹೇಳುವಂತೆ ಎಲ್ಲ ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನಿರ್ದೇಶಿಸಿದರು.
ಇಂದಿನ ವರದಿಯನುಸಾರ ತುಮಕೂರು ನಾಲಾ ವಲಯದಲ್ಲಿ 1150 ಕ್ಯೂಸೆಕ್ಸ್ ನೀರು ಹರಿಯುತ್ತಿದ್ದು, ಗರಿಷ್ಠ ಪ್ರಮಾಣದ ನೀರನ್ನು ಕೆರೆ-ಕಟ್ಟೆಗಳಿಗೆ ಭರ್ತಿ ಮಾಡಲು ಕ್ರಮಕೈಗೊಳ್ಳಬೇಕು. ಕಳೆದ ವರ್ಷದಲ್ಲಿ ಜಿಲ್ಲೆಗೆ ಅಗತ್ಯವಿರುವ ನೀರು ಪಡೆಯಲು ಸಾಧ್ಯವಾಗದೆ ನೀರಿನ ಸಮಸ್ಯೆ ಎದುರಾಗಿತ್ತು. ಈ ವರ್ಷ ಜಿಲ್ಲೆಗೆ ನೀರಿನ ಸಮಸ್ಯೆ ಬಾರದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಸ್ಗರ್ ಬೇಗ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಖಾ, ಪಾಲಿಕೆ ಆರೋಗ್ಯಾಧಿಕಾರಿ ಡಾ.ವೀರೇಶ್ ಕಲ್ಮಠ್, ಸ್ಥಾನಿಕ ವೈದ್ಯಾಧಿಕಾರಿ ಡಾ.ಚೇತನ್, ಮಲೇರಿಯಾ ಅಧಿಕಾರಿ ಡಾ.ಚಂದ್ರಶೇಖರ್, ಕ್ಷಯ ರೋಗ್ ನಿಯಂತ್ರಣಾಧಿಕಾರಿ ಡಾ.ಸನತ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA