ಬೆಳಧರ: ಶಾಲೆಯ ಆಟದ ಮೈದಾನಕ್ಕೆ ಕಾಂಪೌಂಡ್ ಮಾಡಿಸಿಕೊಡದೇ ನಾನು ಶಾಲೆಗೆ ಬರುವುದಿಲ್ಲ ಎಂದು ಪ್ರತಿಜ್ಞೆ ಮಾಡಿ, ಶಾಲೆಯ ಬಿಟ್ಟಿದ್ದ ಮಗುವಿನ ಮನವೊಲಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕಂಪೌಂಡ್ ನಿರ್ಮಾಣದ ಭರವಸೆ ನೀಡಿ ಮಗುವನ್ನು ಶಾಲೆಗೆ ಕರೆದು ಕೊಂಡು ಬಂದ ಘಟನೆ ನಡೆದಿದೆ.
ಶಾಲೆಯ ಕಾಂಪೌಂಡ್ ನಿರ್ಮಿಸದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ ಕಾರಣ ಶಾಲೆಯ ಆಟದ ಮೈದಾನಕ್ಕೆ ಕಾಂಪೌಂಡ್ ಮಾಡಿಕೊಡುವವರೆಗೂ ನಾನು ಶಾಲೆಗೆ ಹೋಗುವುದಿಲ್ಲ ಎಂದು ಮಗು ಪಟ್ಟು ಹಿಡಿದು ಕುಳಿತಿದ್ದು, ಕಳೆದ ಒಂದೂವರೆ ತಿಂಗಳುಗಳಿಂದ ಮಗು ಶಾಲೆಯಿಂದ ಹೊರಗಿದ್ದರೂ ಅಧಿಕಾರಿಗಳು ಶಾಲೆಗೆ ಕರೆ ತರಲು ಮುಂದಾಗಿರಲಿಲ್ಲ.
ನಿಕಟ ಪೂರ್ವ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಮಗು ಶಾಲೆಯಿಂದ ಹೊರಗುಳಿದಿರುವ ಬಗ್ಗೆ ಗೊತ್ತಿದ್ದರೂ, ಅವರು ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ. ಅವರಿಗೆ ಕಾಳಜಿ ತಂಡದ ಸದಸ್ಯರು ಈ ವಿಚಾರವನ್ನು ಪದೇ ಪದೇ ಗಮನಕ್ಕೆ ತಂದರೂ, ಇದು ನನ್ನ ಕೆಲಸವೇ ಅಲ್ಲ, ಎಂಬಂತೆ ಬೇಜವಾಬ್ದಾರಿಯಿಂದ ವರ್ತಿಸಿದ್ದರು.
ಇದರಿಂದ ಬೇಸತ್ತು ಕಾಳಜಿ ತಂಡವು ಉಪ ನಿರ್ದೇಶಕರ ಗಮನಕ್ಕೆ ತಂದರು. ಆದರೆ ಉಪ ನಿರ್ದೇಶಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಲಿಖಿತ ಆದೇಶ ಮಾಡಿ ಕೈತೊಳೆದುಕೊಂಡಿದ್ದರು. ಇದರಿಂದಾಗಿ ಕಾಳಜಿ ತಂಡವು ಈ ಕುರಿತು, ಆಯುಕ್ತರು ಶಿಕ್ಷಣ ಇಲಾಖೆ ಬೆಂಗಳೂರು ಇವರ ಗಮನಕ್ಕೆ ತಂದಿದ್ದರು.
ಇದೀಗ ಹೊಸ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ ನಂತರ ಮಗು ಶಾಲೆಗೆ ಬರುತ್ತಿಲ್ಲ ಎಂಬ ವಿಚಾರ ಅವರ ಗಮನಕ್ಕೆ ತಂದಾಗ ಕೂಡಲೇ ಕಾಳಜಿ ತಂಡದ ಮನವಿಗೆ ಕಾರ್ಯತತ್ಪರರಾಗಿದ್ದು, ಹಾಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉಪ ನಿರ್ದೇಶಕರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ ಶಾಲೆಯಿಂದ ಹೊರಗುಳಿದ ಮಗುವಿನ ಮನವೊಲಿಸಿ, ಪುಸ್ತಕ ಹಾಗೂ ಪೆನ್ಸಿಲ್ ನ್ನು ಮಗುವಿಗೆ ಸ್ವತಃ ಖರೀದಿಸಿ ಕೊಟ್ಟು ಶಾಲೆಗೆ ಕರೆದುಕೊಂಡು ಹೋಗಿ ಶಾಲೆಯಲ್ಲಿ ಮಕ್ಕಳಿಗೆ ಪಾಠವನ್ನೂ ಮಾಡಿ ಜನಸ್ನೇಹಿಯಾಗಿ ನಡೆದುಕೊಂಡಿದ್ದು, ಇನ್ನು 15 ದಿನಗಳಲ್ಲಿ ಶಾಲೆಯ ಕಾಂಪೌಂಡ್ ಮಾಡಿಸಿಕೊಡುವುದಾಗಿ ಮಕ್ಕಳಿಗೆ ಭರವಸೆ ನೀಡಿ ಧೈರ್ಯ ತುಂಬಿದ್ದಾರೆ. ಇದು ಸಾರ್ವಜನಿಕರ ಪ್ರಸಂಶೆಗೆ ಕಾರಣವಾಗಿದೆ.
ಈವರೆಗೆ ಯಾವ ಅಧಿಕಾರಿಗಳು ಕೂಡ ಈ ಶಾಲೆಯ ಬಗ್ಗೆ ಕನಿಷ್ಠ ಕಾಳಜಿ ವಹಿಸಿಲ್ಲ, ಕ್ಷೇತ್ರ ಶಿಕ್ಷಣ ಇಲಾಖೆಗೆ ಈಗಲಾದರೂ ಅಧಿಕಾರ ಇರುವಂತಹ ಅಧಿಕಾರಿಯೊಬ್ಬರು ಬಂದಿದ್ದಾರೆ ಎಂದು ಕಾಳಜಿ ತಂಡದ ಸದಸ್ಯರು ಅಭಿನಂದಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA