ತುಮಕೂರು: ಪುಟ್ಟ ಮಕ್ಕಳಿಗೂ ಶಾಲೆ , ಶಾಲೆಯ ವ್ಯವಸ್ಥೆಯ ಬಗ್ಗೆ ಇರುವ ಕಾಳಜಿಗೆ ಇಡೀ ಊರೇ ಬಾಯಿ ಮೇಲೆ ಬೆರಳಿಟ್ಟುಕೊಂಡಿರುವ ಪ್ರಸಂಗವೊಂದು ತುಮಕೂರು ಜಿಲ್ಲೆಯ ಬೆಳೆದರೆ ಗ್ರಾಮ ಒಂದರಲ್ಲಿ ನಡೆದಿದೆ. ಇಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯೊಂದು ಬಹಳ ವರ್ಷಗಳಿಂದಲೂ ಇದೆ. ಈ ಶಾಲೆಯಲ್ಲಿ ಮೂಲಭೂತ ಸೌಲಭ್ಯಗಳಿಗೇನು ಅಷ್ಟಾಗಿ ಕೊರತೆ ಕಂಡು ಬಂದಿಲ್ಲ. ಆದರೂ ಶಾಲೆಗೆ ಭದ್ರತೆ ನೀಡುವಲ್ಲಿ ಸಂಬಂಧಪಟ್ಟ ಇಲಾಖೆಗಳು ತಾಸ್ಕಾರ ಮನೋಭಾವ ಮಕ್ಕಳ ಮನಸ್ಸಿಗೂ ನಾಟಿರುವುದು ದುರದೃಷ್ಟಕರ ಸಂಗತಿ.
ಇದಕ್ಕೊಂದು ತಾಜಾ ಉದಾಹರಣೆಯೊಂದು ಆಶ್ಚರ್ಯ ಪಡುವ ರೀತಿಯಲ್ಲಿ ಒಂದು ಘಟನೆ ಬೆಳಕಿಗೆ ಬಂದಿದೆ. ಅದೇನೆಂದರೆ ೨೯ ಜುಲೈ ೨೦೨೪ ರ ಸೋಮವಾರ ಶಿಕ್ಷಣಾಧಿಕಾರಿ ಹನುಮಂತಪ್ಪನವರು ಸಮಸ್ಯೆಯತ್ತ ಬೆಳೆಧರೆ ಸರ್ಕಾರಿ ಪ್ರಾಥಮಿಕ ಶಾಲೆಗೆ ಡಿಡಿಪಿಐ ಮಂಜುನಾಥ್ ಅವರೊಂದಿಗೆ ಭೇಟಿ ನೀಡುತ್ತಾರೆ. ಈ ಸಂದರ್ಭದಲ್ಲಿ ಕೆಲವು ರೆಗ್ಯುಲರ್ ಮಕ್ಕಳು ಶಾಲೆ ಬಿಟ್ಟಿದ್ದಾರೆ ಎನ್ನುವ ಮಾಹಿತಿ ತಿಳಿದು ಬರುತ್ತದೆ. ಕೂಡಲೇ ಎಚ್ಚೆತ್ತ ಬಿಇಒ ಹನುಮಂತಪ್ಪ ಗೈರು ಆದ ಮಕ್ಕಳ ಮನೆಗೆ ಭೇಟಿ ನೀಡಲು ಮುಂದಾಗುತ್ತಾರೆ. ಆಗ ಮೊದಲು ಸಿಕ್ಕಿದ್ದು ’ಸಾನ್ವಿ’ ಎನ್ನುವ ಪುಟಾಣಿ ಬಾಲಕಿ, ಮಗುವನ್ನು ನೋಡಿ ಯಾಕೆ ಶಾಲೆಗೆ ಬರುತ್ತಿಲ್ಲ ಎಂದು ಕೇಳಿದ ಕೂಡಲೇ ನನ್ನ ಶಾಲೆಗೆ ಭದ್ರತೆಯಿಲ್ಲ, ಮೊದಲು ಭದ್ರತೆ ಒದಗಿಸಿ ನಂತರ ಶಾಲೆಗೆ ಬರುತ್ತೇನೆ ಎಂದು ಸೌಮ್ಯಭಾವದಿಂದಲೇ ಅಧಿಕಾರಿಗಳ ಬಳಿ ಹೇಳಿದಾಗ ಆಶ್ಚರ್ಯ ಚಕಿತರಾದ ಡಿಡಿಪಿಐ ಮಂಜುನಾಥ್ ಹಾಗೂ ಬಿಇಒ ಹನುಮಂತಪ್ಪ ಅವರು ಶಾಲೆಯಲ್ಲಿ ಆಗಿರುವ ತೊಂದರೆಯಾದರೂ ಏನು? ಎಂದು ಮಗುವನ್ನು ಕೇಳಿದಾಗ ನನ್ನ ಶಾಲೆಗೆ ಕಾಂಪೌಂಡ್ ಕಟ್ಟಿಸಿಕೊಡಿ, ಶಾಲೆ ಸುತ್ತಮುತ್ತಲ ಗದ್ದಲಕ್ಕೆ ಬ್ರೇಕ್ ಹಾಕಿ ಎಂದು ದುಃಖಭರಿತವಾಗಿ ಹೇಳಿದ್ದನ್ನು ಕೇಳಿಸಿಕೊಂಡ ಅಧಿಕಾರಿಗಳು ಕೂಡಲೇ ಮಗುವಿನ ಅಳಲಿಗೆ ಸ್ಪಂದಿಸಿದ್ದಾರೆ.
ಶಾಲೆಗೆ ಭದ್ರತೆ ನೀಡುವ ಕೆಲಸವನ್ನು ಮಾಡುತ್ತೇವೆ. ಶಾಲೆಗೆ ಹೋಗೋಣ ಬನ್ನಿ ಎಂದಾಗ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟ ಬಾಲಕಿ ಮರಳಿ ಶಾಲೆಗೆ ಬಂದ ಪ್ರಸಂಗವೊಂದು ಸೋಮವಾರ ನಡೆದಿದೆ.
ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಕೆಲಸ ಮಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಯ ಕಾರ್ಯವನ್ನು ತುಮಕೂರಿನ ಕಾಳಜಿ ಪೌಂಡೇಶನ್ ಅಧ್ಯಕ್ಷರು, ಕಾನೂನು ಸಲಹೆಗಾರರು ಹಾಗೂ ಸದಸ್ಯರು ಶ್ಲಾಘಿಸಿ ಅಭಿನಂದಿಸಿದ್ದಾರೆ.
ಬಹಳ ದಿನಗಳಿಂದಲೂ ಬೆಳಧರೆ ಸರ್ಕಾರಿ ಪ್ರಾಥಮಿಕ ಶಾಲೆಯ ಸಮಸ್ಯೆ ಕಾಣುತ್ತಿದ್ದರೂ ಯಾವುದೇ ಅಧಿಕಾರಿಗಳು ಇತ್ತ ಸುಳಿಯದೆ, ಜಾರಿಕೊಳ್ಳುವ ಪ್ರಯತ್ನ ಮಾಡುತ್ತಾ ಬಂದಿದ್ದಾರೆ. ಇದು ಮಕ್ಕಳ ಭವಿಷ್ಯ, ಬಡವರ ಮಕ್ಕಳೇ ಹೆಚ್ಚು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ಸಮಸ್ಯೆ ಏನೇ ಇರಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಬಗೆಹರಿಸುವ ಕೆಲಸ ಮಾಡಬೇಕು. ಹಿಂದಿನ ಕ್ಷೇತ್ರ ಶಿಕ್ಷಣಾಧಿಕಾರಿ ಮಾಡಬೇಕಾದ ಕಾರ್ಯವನ್ನು ಇಂದಿನ ಶಿಕ್ಷಣಾಧಿಕಾರಿ ಹನುಮಂತಪ್ಪನವರು ಕೈಗೆತ್ತಿಕೊಂಡಿರುವುದು ಉತ್ತಮ ಬೆಳೆವಣಿಗೆ. ಆದಷ್ಟು ಬೇಗ ಶಾಲೆಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಬೇಕು.
-ನಟರಾಜು ಜಿ.ಎಲ್., ಅಧ್ಯಕ್ಷರು, ಕಾಳಜಿ ಪೌಂಡೇಶನ್, ತುಮಕೂರು
ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಅವರು ಬಂದು ಒಂದು ತಿಂಗಳು ಆಗಿಲ್ಲ. ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ತಲೆಎತ್ತಿ ನಿಂತಿದ್ದ ಬಹುದಿನಗಳ ಸಮಸ್ಯೆಗೆ ಪರಿಹಾರ ನೀಡುವ ಭರವಸೆಯನ್ನು ಪುಟ್ಟ ಮಕ್ಕಳಿಗೆ ನೀಡಿದ್ದಾರೆ. ಇದು ನಿಜಕ್ಕೂ ಆಶಾದಾಯಕ ಬೆಳವಣಿಗೆ. ಆದಷ್ಟು ಬೇಗ ಬೆಳಧರೆ ಸರ್ಕಾರಿ ಪ್ರಾಥಮಿಕ ಶಾಲೆಗೆ ಕಾಂಪೌಂಡ್ ನಿರ್ಮಾಣ ಮಾಡುವ ಕೆಲಸ ತುರ್ತು ಆಗಬೇಕಿದೆ ಜೊತೆಗೆ ಕೊರತೆಯಾಗಿರುವ ಮೂಲಭೂತ ಸೌಲಭ್ಯಗಳನ್ನು ನೀಡುವ ಮೂಲಕ ಶಾಲೆಯ ಬೆಳವಣಿಗೆಗೆ ಶಿಕ್ಷಣ ಇಲಾಖೆ ಮುಂದಾಗಬೇಕು.
– ಮುನಿಲಕ್ಷ್ಮಯ್ಯ ಎ, ಪ್ರಧಾನ ಕಾರ್ಯದರ್ಶಿ, ಕಾಳಜಿ ಪೌಂಡೇಶನ್, ತುಮಕೂರು
ಹಿನ್ನಲೆ: ಎರಡು ತಿಂಗಳ ಹಿಂದೆಯೆ ಶಾಲೆಗೆ ಪತ್ರಕೊಟ್ಟು ಶಾಲೆಗೆ ಹೋಗದೆ ಮನೆಯಲ್ಲಿಯೇ ಉಳಿದುಕೊಳ್ಳುವ ಬಾಲಕಿಯನ್ನು ಮನವಲಿಸುವ ಕೆಲಸವನ್ನು ಶಿಕ್ಷಣ ಇಲಾಖೆ ಮಾಡುವುದಿಲ್ಲ. ಈ ಘಟನೆಯು ಕಾಳಜಿ ತಂಡದ ಗಮನಕ್ಕೂ ಬರುತ್ತದೆ. ತಕ್ಷಣವೇ ಎಚ್ಚೆತ್ತುಕೊಂಡ ಕಾಳಜಿ ತಂಡ ಆಗಿನ ಕ್ಷೇತ್ರ ಶಿಕ್ಷಣಾಧಿಕಾರಿ ಅವರನ್ನು ಪೋನ್ ಮೂಲಕ ಸಂಪರ್ಕಿಸಉವ ಕಾರ್ಯ ಮಾಡುತ್ತದೆ. ಆದರೆ ಕಾಳಜಿ ತಂಡಕ್ಕೆ ಸ್ಪಂದಿಸದ ಶಿಕ್ಷಣಾಧಿಕಾರಿಯ ನಡೆಯನ್ನು ಖಂಡಿಸಿ ಡಿಡಿಪಿಐ(ಉಪ ನಿರ್ದೇಶಕರು) ಅವರಿಗೆ ಈ ಘಟನೆ ಕುರಿತು ಮನವಿಯನ್ನು ಮಾಡುತ್ತದೆ.
ಈ ಮನವಿಯನ್ನು ಪುರಸ್ಕರಿಸಿದ ಉಪ ನಿರ್ದೇಶಕ ಮಂಜುನಾಥ್ ಅವರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಬೆಳಧರೆ ಶಾಲೆಗೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸಿ ಎಂದು ಪತ್ರವನ್ನು ಬರೆಯುತ್ತಾರೆ. ಅಷ್ಟಾಗಿಯೂ ಶಾಲೆ ಬಿಟ್ಟ ಮಗುವನ್ನು ಭೆಟಿ ಮಾಡಿ ಕರೆತರುವ ಯಾವುದೇ ಕೆಲಸವೂ ಆಗಿರುವುದಿಲ್ಲ. ಇದನ್ನು ಗಮನಿಸಿದ ಕಾಳಜಿ ತಂಡವು ಶಿಕ್ಷಣ ಇಲಾಖೆ ಆಯುಕ್ತರನ್ನು ಭೇಟಿ ಶಾಲೆಯ ವಸ್ತುಸ್ಥಿತಿಯನ್ನು ತಿಳಿಸಿ ಕ್ರಮ ವಹಿಸುವಂತೆ ದೂರು ಕೂಡ ನೀಡಲಾಗುತ್ತದೆ. ಅಷ್ಟಾಗಿಯೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಗುವನ್ನು ಶಾಲೆಗೆ ಕರೆತರುವ ಯಾವುದೇ ಪ್ರಯತ್ನವನ್ನು ಮಾಡಿರುವುದಿಲ್ಲ. ಇದೀಗ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಸೂರ್ಯಕಲಾ ಅವರನ್ನು ಸರ್ಕಾರ ಎತ್ತಂಗಡಿ ಮಾಡಿದೆ. ಇದರ ಬೆನ್ನಲ್ಲೆ ಬಂದಂತಹ ನೂತನ ಶಿಕ್ಷಣಾಧಿಕಾರಿ ಹನುಮಂತಪ್ಪ ಅವರಲ್ಲಿ ಕಾಳಜಿ ತಂಡದ ಕಾನೂನು ಸದಸ್ಯರು ಮನವಿ ಮಾಡಿದ ಬೆನ್ನಲ್ಲೆ ಕಾರ್ಯಪ್ರವೃತ್ತರಾದ ಕ್ಷೇತ್ರ ಶಿಕ್ಷಣಾಧಿಕಾರಿ ಶಾಲೆ ಬಿಟ್ಟ ಬಾಲಕಿಯನ್ನು ಶಾಲೆಗೆ ಕರೆತರುವ ಕಾರ್ಯ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296