ತನಿಖಾ ವರದಿ: ಮಂಜುಸ್ವಾಮಿ ಎಂ.ಎನ್.
ಕೊರಟಗೆರೆ: ಪ್ರೀತಿಸಿ ಮದುವೆ ಆಗಿದ್ದ ಗಂಡನನ್ನು ಬಿಟ್ಟು ಮಾಜಿ ಪ್ರಿಯಕರನ ಹಿಂದೆ ಬಿದ್ದವಳು ತನ್ನ ಪತಿಯನ್ನೇ ಹತ್ಯೆ ಮಾಡಿಸಿರುವ ಘಟನೆ ಕೊರಟಗೆರೆಯ ಮಲ್ಲೇಕಾವು ಗ್ರಾಮದಲ್ಲಿ ನಡೆದಿದೆ.
ಪ್ರಕಾಶ್ (32) ಮೃತ ದುರ್ದೈವಿಯಾಗಿದ್ದಾನೆ. ಪ್ರಿಯಕರ ಗುಂಡನ ಹಿಂದೆ ಹೋದವಳ ಕಥೆಯಲ್ಲಿ ಪೊಲೀಸ್ ತನಿಖೆಯಿಂದ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮೂರು ಜನ ಆರೋಪಿಗಳ ಮೇಲೆ ಪ್ರಥಮವಾಗಿ ಪ್ರಕರಣ ದಾಖಲಿಸಿದ್ದ ಕೊರಟಗೆರೆ ಪೊಲೀಸರು ತನಿಖೆ ವೇಳೆ ಬರೋಬ್ಬರಿ ಆರು ಜನ ಸೇರಿ ಪ್ರಕಾಶ್‍ನನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ತಾಲ್ಲೂಕಿನ ಕಸಬಾ ಹೋಬಳಿ ತುಂಬಾಡಿ-ಸಿದ್ದರಬೆಟ್ಟದ ಮಾರ್ಗದ ಕೆಪಿಟಿಸಿಎಲ್ ಘಟಕದ ಬಳಿ ಜು.28ರ ಭಾನುವಾರ ರಾತ್ರಿ 8 ಗಂಟೆಯ ವೇಳೆಯಲ್ಲಿ ಪ್ರಕಾಶನ ಹತ್ಯೆಯಾಗಿತ್ತು. ಘಟನೆಗೆ ಸಂಬಂಧ ತನಿಖೆ ಚುರುಕುಗೊಳಿಸಿದ ಕೊರಟಗೆರೆ ಪೊಲೀಸರು ಹೆಂಡತಿಯ ಪಾತ್ರದ ಜೊತೆ ಹಳೇ ಪ್ರೇಮಿಯ ಕೈವಾಡ ಸೇರಿ ಆರು ಜನ ಆರೋಪಿಗಳ ಕೈವಾಡ ಇರುವುದು ತಿಳಿದು ಬಂದಿದ್ದು, ಆರು ಜನರನ್ನು ಹೆಡೆಮುರಿ ಕಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಂಚೆ ಕಚೇರಿಯ ಸಿಬ್ಬಂದಿ ಮೃತ ಪ್ರಕಾಶನ ಕೊಲೆಯ ಪ್ರಕರಣದಲ್ಲಿ ಬೆಂಗಳೂರಿನ ಗೋವಿಂದರಾಜು7 (36), ಮಲ್ಲೇಕಾವಿನ ಹರ್ಷಿತಾ (28), ಸೋಮಶೇಖರ್ (27), ಮಹೇಶ್ (32), ಕಂಬದಹಳ್ಳಿಯ ದರ್ಶನ್ (24), ಬಾಗೂರು ರಂಗಸ್ವಾಮಿ ಎಂಬ ಆರು ಜನ ಆರೋಪಿಗಳು ಈಗ ಕೊರಟಗೆರೆ ಪೊಲೀಸರ ಅತಿಥಿಗಳಾಗಿರುವುದು ತಿಳಿದು ಬಂದಿದೆ.
ಮಾಜಿ ಲವರ್ ಪ್ರೀತಿಗಾಗಿ ಮನೆ ಬಿಟ್ಟಿದ್ದ ಹರ್ಷಿತಾ:
ಕಲಬುರ್ಗಿ ಜಿಲ್ಲೆಯ ಚಿಂಚುಲ್ಲಿ ಗ್ರಾಮದ ಮೃತ ಪ್ರಕಾಶನಿಗೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಹರ್ಷಿತಾ ಮದುವೆಯಾಗಿ ಮೂರು ವರ್ಷವಾಗಿತ್ತು. ಇವರಿಬ್ಬರಿಗು ಎರಡು ವರ್ಷದ ಗಂಡು ಮಗು ಜನಿಸಿದೆ. ಕಳೆದ ಮೂರು ತಿಂಗಳ ಹಿಂದೆಯಷ್ಟೇ ಹರ್ಷಿತಾ ಗೋವಿಂದರಾಜು ಅಲಿಯಾಸ್ ಗುಂಡನ ಜೊತೆ ಮನೆ ಬಿಟ್ಟು ಓಡಿ ಹೋಗಿದ್ದಳು. ಗಂಡನ ದೂರಿನ ಬಳಿಕ ಪೊಲೀಸರ ಮೂಲಕ ರಾಜಿ ಸಂಧಾನ ಆಗಿತ್ತು. ಗುಂಡನ ಸಹವಾಸದಿಂದ ಗಂಡನ ಪ್ರಾಣವನ್ನೇ ತೆಗೆಯುವ ನಿರ್ದಾರಕ್ಕೆ ಬಂದ ಹರ್ಷಿತ ಜೈಲುಪಾಲಾಗುವ ಸನ್ನಿವೇಶ ಎದುರಾಗಿದ್ದು, ಇದರಿಂದ ಮಗು ಅನಾಥವಾಗಿದೆ.
ಸ್ಥಳಕ್ಕೆ ತುಮಕೂರು ಎಸ್ಪಿ ಅಶೋಕ್, ಮಧುಗಿರಿ ಡಿವೈಎಸ್ಪಿ ರಾಮಕೃಷ್ಣಯ್ಯ ಮಾರ್ಗದರ್ಶನದಲ್ಲಿ ಕೊರಟಗೆರೆ ಸಿಪಿಐ ಅನಿಲ್, ಪಿಎಸೈಗಳಾದ ಚೇತನ್ ಕುಮಾರ್,ಯೊಗೀಶ್, ಎಎಸೈ ಮಂಜುನಾಥ ಆರು ಜನ ಆರೋಪಿಗಳನ್ನು ಕೃತ್ಯ ನಡೆದ 24 ಗಂಟೆಯೊಳಗೆ ಅರೆಸ್ಟ್ ಮಾಡುವಲ್ಲಿ ಸಫಲರಾಗಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೃತ್ಯದ ಸಂಪೂರ್ಣ ಹಿನ್ನಲೆ:
ಸಾಮಾಜಿಕ ಜಾಲತಾಣದಲ್ಲಿ ಪ್ರಕಾಶ್‍ಗೆ ಹರ್ಷಿತಾ ಪರಿಚಯವಾಗಿತ್ತು. ಬಳಿಕ ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಆದರೆ ಇದಕ್ಕೂ ಮೊದಲು ಹರ್ಷಿತಾ ಪ್ರೀತಿಸುತ್ತಿದ್ದವನ ಸಂಪರ್ಕ ಸಾಮಾಜಿಕ ಜಾಲತಾಣದಲ್ಲಿ ದೊರಕಿದ್ದು, ಇದರಿಂದ ಹಳೆ ಪ್ರಿಯಕರನಿಗಾಗಿ ಪತಿಯನ್ನೇ ಕೊಲೆ ಮಾಡಿಸಿದ್ದಾಳೆ ಎನ್ನಲಾಗಿದೆ. ತಾಲ್ಲೂಕಿನ ಮಲ್ಲೇಕಾವು ಗ್ರಾಮದ ಹರ್ಷಿತಾಳಿಗೆ 3 ವರ್ಷದ ಹಿಂದೆ ಕಲಬುರುಗಿಯ ಜಿಲ್ಲೆಯ ಚಿಂಚೋಳಿ ಗ್ರಾಮದ ಪ್ರಕಾಶ್ ಇನ್ಸ್ಟಾ ಗ್ರಾಂನಲ್ಲಿ ಪರಿಚಯವಾಗಿದ್ದ ಇಬ್ಬರು ಪ್ರೀತಿಸಿ ಮದುವೆ ಅಗಿದ್ದರು. ಪತ್ನಿಯ ಜೊತೆ ಆಕೆಯ ತವರು ಮನೆಯಲ್ಲೇ ಪ್ರಕಾಶ್ ವಾಸವಿದ್ದು, ದಂಪತಿಗೆ ಒಂದು ಮಗು ಕೂಡ ಆಗಿತ್ತು.ಪ್ರಕಾಶ್ ಹೊರಗುತ್ತಿಗೆ ನೌಕರನಾಗಿ ಸ್ಥಳೀಯ ಅಂಚೆ ಕಚೇರಿಯಲ್ಲಿ ಪೋಸ್ಟ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ,ಈ ಮಧ್ಯೆ ಹರ್ಷಿತಾಳಿಗೆ ಸಾಮಾಜಿಕ ಜಾಲತಾಣದಲ್ಲಿ ಮಾಜಿ ಪ್ರಿಯತಮ ಸಂಪರ್ಕಕ್ಕೆ ಸಿಕ್ಕಿದ್ದು ಮತ್ತೇ ಪ್ರೀತಿ ಅರಳಿದೆ.
ಪ್ರೀತಿಗೆ ಅಡ್ಡಿಯಾದ ಪತಿಯನ್ನು ಮುಗಿಸಲು ಸಹೋದರ ಸೋಮಶೇಖರ ಹಾಗೂ ಪ್ರಿಯತಮ ಗೋವಿಂದರಾಜು ಆಲಿಯಾಸ್ ಗುಂಡನಿಗೆ ಹರ್ಷಿತಾ ಸುಪಾರಿ ಕೊಟ್ಟಿದ್ದು, ಪೂರ್ವ ಯೋಜನೆಯಂತೆ ಹರ್ಷಿತಾ ಮತ್ತು ಪ್ರಕಾಶ್ ಜೊತೆಗಿರುವಾಗ ಹತ್ಯೆಗೆ ಸಂಚು ರೂಪಿಸಿ ಪ್ರಕಾಶ್ ಮೇಲೆ ಐದು ಜನರ ಗುಂಪು ಮಾರಣಾಂತಿಕ ಹಲ್ಲೆ ನಡೆಸಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರಕಾಶ್‍ನನ್ನು ಸ್ಥಳೀಯರು ತಾಲ್ಲೂಕು ಆಸ್ಪತ್ರೆಗೆ ಸೇರಿಸಿದ್ದರೂ ಕೂಡಾ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ.
ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ:
ಈ ಸಂಬಂಧ ಕೊರಟಗೆರೆ ಸಿಪಿಐ ಅನಿಲ್ ಮತ್ತು ಪಿಎಸ್ಐ ಚೇತನ್ ಕುಮಾರ್,ಪಿಎಸ್ಐ ಯೋಗೀಶ್ ನೇತೃತ್ವದ ಪೊಲೀಸರ ತಂಡ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.ಅನುಮಾನ ಬಂದ ಪೊಲೀಸರು ಪತ್ನಿ ಹರ್ಷಿತಾಳನ್ನು ತನಿಖೆ ಮಾಡಿದಾಗ ಕೃತ್ಯ ಎಸಗಿರುವ ಹಿನ್ನೆಲೆ ಮತ್ತು ಇನ್ನಿತರ ಸಹಚರರ ಬಗ್ಗೆ ಬಾಯಿ ಬಿಟ್ಟಿರುವುದು ಬೆಳಕಿಗೆ ಬಂದಿದೆ. ತಕ್ಷಣ ಎಚ್ಚೆತ್ತ ಪೊಲೀಸರು ಆರೋಪಿಗಳನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ. ಇದರಿಂದ ಕೊರಟಗೆರೆ ಪೊಲೀಸರ ಕಾರ್ಯ ವೈಖರಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296