ನವದೆಹಲಿ: ಮಾಜಿ ವಿದೇಶಾಂಗ ಸಚಿವ ಕೆ.ನಟ್ವರ್ ಸಿಂಗ್ ಶನಿವಾರ ರಾತ್ರಿ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಅವರಿಗೆ 93 ವರ್ಷ ವಯಸ್ಸಾಗಿತ್ತು. ಅನಾರೋಗ್ಯ ಹಿನ್ನೆಲೆ ದೆಹಲಿ ಬಳಿಯ ಗುರುಗ್ರಾಮ್ ನ ಮೇದಾಂತ ಆಸ್ಪತ್ರೆಯಲ್ಲಿ ಕಳೆದೆರಡು ವಾರಗಳಿಂದ ದಾಖಲಾಗಿದ್ದ ಅವರು ಕೊನೆಯುಸಿರೆಳೆದಿದ್ದಾರೆ.
1931ರಲ್ಲಿ ಸಿಂಗ್ ಅವರು ರಾಜಸ್ಥಾನದ ಭರತ್ ಪುರ ಜಿಲ್ಲೆಯಲ್ಲಿ ಜನಿಸಿದ್ದರು. ಅವರು ವೃತ್ತಿ ರಾಜತಾಂತ್ರಿಕರಾಗಿ ಕಾರ್ಯನಿರ್ವಹಿಸಿದ್ದರು. ನಟ್ವರ್ ಸಿಂಗ್ ವಿದೇಶಿ ವ್ಯವಹಾರಗಳ ಸೂಕ್ಷ್ಮ ವಿಷಯಗಳ ಬಗ್ಗೆ ಬರೆಯುತ್ತಿದ್ದ ಲೇಖನಗಳಿಂದಲೂ ಜನಪ್ರಿಯತೆ ಗಳಿಸಿದ್ದರು. ತಮ್ಮ ವಿಶಿಷ್ಟ ವೃತ್ತಿಜೀವನದ ಅವಧಿಯಲ್ಲಿ ಅವರು ಅನೇಕ ಗೌರವಗಳಿಗೆ ಪಾತ್ರರಾಗಿದ್ದರು. ಅವರ ಸೇವೆಗಾಗಿ 1984ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗಿದೆ.
ಅನುಭವಿ ರಾಜಕಾರಣಿ, ಕೆ.ನಟ್ವರ್ ಸಿಂಗ್ ಅವರು ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ–1 ಸರ್ಕಾರದ 2004-05ರ ಅವಧಿಯಲ್ಲಿ ಭಾರತದ ವಿದೇಶಾಂಗ ಸಚಿವರಾಗಿದ್ದರು. 1966ರಿಂದ 1971ರವರೆಗೆ ಪ್ರಧಾನಿ ಇಂದಿರಾ ಗಾಂಧಿಯವರ ಅವಧಿಯಲ್ಲಿ ಸಿಂಗ್ ಪಾಕಿಸ್ತಾನಕ್ಕೆ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296