ತುಮಕೂರು: ತುಮಕೂರು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಗಳ ೭೦ ಆಯ್ದ ಸರ್ಕಾರಿ ಶಾಲೆಗಳಿಗೆ ಇಂಡಿಯಾ ಲಿಟರೆಸಿ ಪ್ರಾಜೆಕ್ಟ್ (ILP) ಹಾಗೂ EPSON ಸಂಸ್ಥೆಗಳ ಸಹಕಾರದಿಂದ ಸ್ಮಾರ್ಟ್ ಕ್ಲಾಸ್ ಪರಿಕರಗಳನ್ನು ನೀಡುವ ಮೂಲಕ ಸರ್ಕಾರಿ ಶಾಲೆಗಳನ್ನು ಬಹು ಆಯಾಮ ಕಲಿಕಾ ಅಂಗಳವಾಗಿ ಪರಿವರ್ತಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಭು ಜಿ ತಿಳಿಸಿದರು.
ಜಿಲ್ಲೆಯ ಗುಬ್ಬಿ ತಾಲ್ಲೂಕು ಪೆದ್ದನಹಳ್ಳಿ ಗ್ರಾಮ ಪಂಚಾಯತಿ ಕೆ.ಮತ್ತಿಘಟ್ಟ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಅನುಭವಾತ್ಮಕ ಕಲಿಕೆಗೆ ಪೂರಕವಾಗುವಂತೆ ಲ್ಯಾಪ್ ಟಾಪ್, ಪ್ರೊಜೆಕ್ಟರ್, ಸ್ಪೀಕರ್ಸ್, ಪಿಪಿಟಿ ಆಧಾರಿತ ಡಿಜಿಟಲ್ ಕಂಟೆಂಟ್, ಸ್ಕ್ರೀನ್, ಸುಮಾರು 200 ವಿಜ್ಞಾನ ಪರಿಕಲ್ಪನೆಗಳನ್ನು ವಿವರಿಸಬಹುದಾದ, 150 ಅಧಿಕ ಪ್ರಯೋಗಗಳನ್ನು ಮಾಡಿಸಬಹುದಾದ ವಿಜ್ಞಾನ ಪ್ರಯೋಗ ಕಿಟ್ಗಳನ್ನು ಪ್ರತಿ ಶಾಲೆಗೆ 2 ಕಿಟ್ನಂತೆ 70 ಶಾಲೆಗಳಿಗೆ ನೀಡಲಾಗಿದೆ ಎಂದು ತಿಳಿಸಿದರು.
ಕಲರ್ ಕೋಡಿಂಗ್ ಮಾಡಲಾದ ಸುಮಾರು 350 ಕ್ಕೂ ಅಧಿಕ ಪುಸ್ತಕಗಳು, ಬುಕ್ ರ‍್ಯಾಕ್, ರಿಜಿಸ್ಟರ್ ಪುಸ್ತಕ, ಮುಂತಾದ ಪರಿಕರಗಳನ್ನು 70 ಶಾಲೆಗಳಿಗೆ ನೀಡಿ GROWBY ರೀಡಿಂಗ್ ಮೆಥಡ್ ಮೂಲಕ ಪುಸ್ತಕಗಳನ್ನು ವಿತರಿಸಿ ಮಕ್ಕಳ ಓದುವ ಮಟ್ಟವನ್ನು ವೃದ್ಧಿಸಲು ಮಕ್ಕಳ ಸ್ನೇಹಿ ಗ್ರಂಥಾಲಯಗಳನ್ನು 70 ಶಾಲೆಗಳಲ್ಲಿ ಸ್ಥಾಪಿಸಲಾಗಿದೆ ಎಂದು ಹೇಳಿದರು.
ಪ್ರೌಢ ಶಾಲಾ ವಿಧ್ಯಾರ್ಥಿಗಳಿಗೆ 10ನೇ ತರಗತಿ ಮುಗಿದ ನಂತರ ಯಾವೆಲ್ಲಾ ಶೈಕ್ಷಣಿಕ ಕೋರ್ಸ್ ಗಳು ಲಭ್ಯವಿವೆ ಹಾಗೂ ಆ ಕೋರ್ಸ್ ಓದಿದ ನಂತರ ಯಾವೆಲ್ಲಾ ವೃತ್ತಿಗಳಿಗೆ ಆಯ್ಕೆಯಾಗಬಹುದು ಎನ್ನುವ ಕುರಿತು ಮಾಹಿತಿಯನ್ನೊಳಗೊಂಡ ಅಗತ್ಯ ಪರಿಕರಗಳನ್ನು (ಚಾರ್ಟ್, ಪ್ಲಾನರ್ ಪುಸ್ತಕ, ಅಭ್ಯಾಸ ಪುಸ್ತಕ) ನೀಡುವ ಮೂಲಕ ವೃತ್ತಿ ಹಾಗೂ ಶೈಕ್ಷಣಿಕ ಮಾರ್ಗದರ್ಶನ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಎಲ್ಲಾ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಐ.ಎಲ್.ಪಿ. ಸಂಸ್ಥೆಯಿಂದ ತಾಲ್ಲೂಕಿಗೆ ಒಬ್ಬರಂತೆ ಸಿಬ್ಬಂದಿಗಳು ಪ್ರತಿದಿನ ಎರಡು ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರಿಗೆ ಅಗತ್ಯ ತರಬೇತಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಯಟ್ ಪ್ರಾಂಶುಪಾಲ ಮಂಜುನಾಥ್, ಮಧುಗಿರಿ ವಿಭಾಗದ ಡಯಟ್ ಪ್ರಾಂಶುಪಾಲ ಗಂಗಾಧರ್, ಸಿ ಎಸ್ ಆರ್ ತಂಡದ ಪ್ರವೀಣ್ ಕುಮಾರ್, ಇಂಡಿಯಾ ಲಿಟರೆಸಿ ಪ್ರಾಜೆಕ್ಟ್ (ILP) ಹಾಗೂ EPSON ಸಂಸ್ಥೆಗಳ ಪ್ರತಿನಿಧಿಗಳು, ಗುಬ್ಬಿ ಕ್ಷೇತ್ರ ಶಿಕ್ಷಣಾಧಿಕಾರಿ ಲೇಪಾಕ್ಷಪ್ಪ, ಎಸ್.ಡಿ.ಎಂ.ಸಿ ಅಧ್ಯಕ್ಷ ಸೋಮು ಸ್ವಾಮಿ ಸೇರಿದಂತೆ ಶಿಕ್ಷಕರು, ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಂತರ ಗುಬ್ಬಿ ತಾಲ್ಲೂಕು ಪಂಚಾಯತಿ ವತಿಯಿಂದ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಗಳಿಗಾಗಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಡುವೆ ಸಮನ್ವಯ ಕಾಯ್ದುಕೊಂಡಾಗ ಮಾತ್ರ ನರೇಗಾ, ಸ್ವಚ್ಛಭಾರತ್ ಮಿಷನ್, ಜಲ್ಜೀವನ್ ಮಿಷನ್, ಇ-ಸ್ವತ್ತು, ವಸತಿ, ಸಂಜೀವಿನಿ ಸೇರಿದಂತೆ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಸಾಧ್ಯ ಎಂದರು.
ಕಾಮಗಾರಿಗಳ ಸ್ಥಳ ಪರಿಶೀಲನೆ : ಗುಬ್ಬಿ ತಾಲ್ಲೂಕಿನ ಕಡಬ ಗ್ರಾಮ ಪಂಚಾಯತಿ ಕೆ.ರಾಮಪುರ ಗ್ರಾಮದಲ್ಲಿ ಜಲ್ ಜೀವನ್ ಮಿಷನ್ ಯೋಜನೆಯಡಿ ಅನುಷ್ಠಾನಗೊಂಡಿರುವ ಕಾಮಗಾರಿಯ ಪರಿಶೀಲನೆ ನಡೆಸಿ, ಸ್ಥಳೀಯರ ಸಮಸ್ಯೆಗಳನ್ನು ಆಲಿಸಿ ಅಹವಾಲುಗಳನ್ನು ಸ್ವೀಕರಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296