ತುಮಕೂರು: ಸರ್ಕಾರದ ಎಲ್ಲ ಯೋಜನೆಗಳ ಸೌಲಭ್ಯಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವ ಕಾರ್ಯ ಮಾಡಬೇಕು ಎಂದು ತುಮಕೂರು ತಾಲ್ಲೂಕು ಪಂಚಾಯಿತಿಯ ಆಡಳಿತಾಧಿಕಾರಿ ಹಾಗೂ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶಾರದಮ್ಮ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ವತಿಯಿಂದ ನಗರದ ಎಂ.ಜಿ.ರಸ್ತೆಯ ಬಾಲ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉತ್ತಮ ಬಾಂಧವ್ಯ ಹೊಂದಿರಬೇಕು. ಸರ್ಕಾರ ರೂಪಿಸುವ ಎಲ್ಲ ಯೋಜನೆಗಳ ಕುರಿತು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕು. ನರೇಗಾ, ಇ–ಸ್ವತ್ತು, ಜಲ್ಜೀವನ್ ಮಿಷನ್, ಸ್ವಚ್ಛ ಭಾರತ್ ಮಿಷನ್ ಹಾಗೂ ಸಂಜೀವಿನಿ ಎನ್.ಆರ್.ಎಲ್.ಎಮ್. ಯೋಜನೆಗಳಿಂದ ದೊರೆಯುವಂತಹ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಪೂರ್ಣ ಪ್ರಮಾಣದಲ್ಲಿ ತಲುಪಿಸುವ ಕಾರ್ಯ ನಮ್ಮೆಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಹೇಳಿದರು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಬಿ.ಸುರೇಶ್ಗೌಡ ಅವರು, ಪ್ರತಿಯೊಂದು ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರು ಹಾಗೂ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಮಹಾತ್ಮ ಗಾಂಧೀಜಿ ಅವರ ಕನಸನ್ನು ನನಸು ಮಾಡಲು ಗ್ರಾಮೀಣ ಭಾಗದಲ್ಲಿ ಮೊದಲು ಸ್ವಚ್ಛತೆಗೆ ಆದ್ಯತೆ ನೀಡಿ, ಹಸಿ–ಕಸ ಹಾಗೂ ಒಣ–ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಎಲ್ಲ ಪಂಚಾಯಿತಿಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಜಲ್ ಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆ–ಮನೆಗೆ ನಳ ಸಂಪರ್ಕ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಪಕ್ಷಾತೀತವಾಗಿ ಹಾಗೂ ಪಾರದರ್ಶಕವಾಗಿ ಅಧಿಕಾರಿಗಳು/ ಚುನಾಯಿತ ಪ್ರತಿನಿಧಿಗಳು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಜೀವಿನಿ ಎನ್.ಆರ್.ಎಲ್.ಎಮ್ ಯೋಜನೆಯಡಿ ಸ್ವ–ಸಹಾಯ ಮಹಿಳೆಯರು ಘನ ತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ಚಾಲಕಿಯರು ಹಾಗೂ ಸಹಾಯಕಿಯರಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಸ್ವ–ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸಿದ ವಿವಿಧ ಬಗೆಯ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ತಾಲ್ಲೂಕು ಪಂಚಾಯಿತಿ ವತಿಯಿಂದ ತಾಲ್ಲೂಕು ಮಟ್ಟದ ಸಂಜೀವಿನಿ ಸಂತೆ ಮೇಳವನ್ನು ಆಯೋಜಿಸಬೇಕು ಎಂದರು.
ತುಮಕೂರು ತಾಲ್ಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕ ಎಸ್.ಎಸ್.ಮಂಜುನಾಥ್ ಮಾತನಾಡಿ, ತಾಲ್ಲೂಕಿನಲ್ಲಿ ನರೇಗಾ ಯೋಜನೆಯಡಿ ಸೃಜಿಸಿರುವ ಮಾನವ ದಿನಗಳು, ಶಾಲಾ ಕಾಂಪೌಂಡ್, ಬದು ನಿರ್ಮಾಣ, ಶೌಚಾಲಯಗಳು ಸೇರಿದಂತೆ ತಾಲ್ಲೂಕಿನ ಸಮಗ್ರ ಮಾಹಿತಿಯನ್ನು ಪಿಪಿಟಿ ಪ್ರದರ್ಶನದ ಮೂಲಕ ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ(ಆಡಳಿತ) ಹಾಲಸಿದ್ದಪ್ಪ ಪೂಜೇರಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಹರ್ಷಕುಮಾರ್, ಜಲ್ ಜೀವನ್ ಮಿಷನ್ ಸಹಾಯಕ ಕಾರ್ಯಪಾಲಕ ಅಭಿಯಂತರ ಕೃಷ್ಣಕಾಂತ್, ತಾಲ್ಲೂಕು ಪಂಚಾಯತ್ ಯೋಜನಾಧಿಕಾರಿ ಬಿ.ಲೋಕೇಶ್ ಕುಮಾರ್, ತಾಲ್ಲೂಕಿನ 41 ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಸೇರಿದಂತೆ ಮತಿತ್ತರರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ನರೇಗಾ ಯೋಜನೆಯಡಿ ಮೂಲಭೂತ ಸೌಕರ್ಯ ಹಾಗೂ ಸಮಗ್ರ ಅಭಿವೃದ್ಧಿಗಾಗಿ ಕಣಕುಪ್ಪೆ ಗ್ರಾಮ ಪಂಚಾಯಿತಿ, ಉತ್ತಮ ಶಾಲಾಭಿವೃದ್ಧಿ ಕಾಮಗಾರಿಗಳ ಅನುಷ್ಠಾನಕ್ಕಾಗಿ ಸಿರಿವರ ಗ್ರಾಮ ಪಂಚಾಯಿತಿ, ಅತೀ ಹೆಚ್ಚು ವೈಯಕ್ತಿಕ ಕಾಮಗಾರಿಗಾಗಿ ತಿಮ್ಮರಾಜನಹಳ್ಳಿ ಗ್ರಾಮ ಪಂಚಾಯಿತಿ, ಸಮಗ್ರ ಸ್ವಚ್ಛತೆಗಾಗಿ ಕೆಸರಮಡು ಗ್ರಾಮ ಪಂಚಾಯಿತಿ, ಸುಸ್ಥಿರ ಅಭಿವೃದ್ಧಿ ಸಾಧನೆಗಾಗಿ ಅರಕೆರೆ ಸಂಜೀವಿನಿ ಜಿಪಿಎಲ್ ಎಫ್ ಗೆ ಪ್ರಶಸ್ತಿ ವಿತರಿಸಲಾಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q