ತುಮಕೂರು: ಸುಮಾರು 30 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಅಂಗನವಾಡಿ ಕೇಂದ್ರವನ್ನು ಅದೇ ಸ್ಥಾನದಲ್ಲಿ ಪುನಃ ಸ್ಥಾಪಿಸುವಂತೆ ಒತ್ತಾಯಿಸಿ, ಬಹುಜನ ಸಮಾಜ ಪಾರ್ಟಿ(BSP) ತುಮಕೂರು ಘಟಕದ ನಗರಾಧ್ಯಕ್ಷ ದಿನೇಶ್ ಬಾಬು ಕೆ.ಬಿ. ಇವರ ನೇತೃತ್ವದಲ್ಲಿ ತುಮಕೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ.
ಘಟನೆಯ ವಿವರ:
ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ 34ನೇ ವಾರ್ಡ್ ನ ಕ್ಯಾತ್ಸಂದ್ರ ಕಾಲೋನಿ(ಸುಭಾಷ್ ನಗರ) 1992—93ನೇ ಸಾಲಿನಲ್ಲಿ ಸರ್ಕಾರಿ ಜಾಗದಲ್ಲಿ ರೋಜ್’ಗಾರ್ ಯೋಜನೆ ಅಡಿಯಲ್ಲಿ ಅಂಗನವಾಡಿ ನಿರ್ಮಿಸಿ ಸುಮಾರು 30 ವರ್ಷಗಳ ಕಾಲ ಸುಲಲಿತವಾಗಿ ನಡೆಸಿಕೊಂಡು ಬರಲಾಗಿತ್ತು.
ಕಳೆದೆರಡು ವರ್ಷಗಳಿಂದ ಕಟ್ಟಡ ಶಿಥಿಲಗೊಂಡ ಕಾರಣ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಶಿಶು ಅಭಿವೃದ್ಧಿ ಇಲಾಖೆಯು ಅದೇ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ಅಂಗನವಾಡಿ ಕೇಂದ್ರವನ್ನು ನಡೆಸುತ್ತಿದೆ. ಈ ನಡುವೆ ಶಿಶು ಅಭಿವೃದ್ಧಿ ಇಲಾಖೆ ಮತ್ತು ಸ್ಥಳೀಯರ ಮನವಿ ಮೇರೆಗೆ ತುಮಕೂರು ನಗರದ ಶಾಸಕ ಜ್ಯೋತಿ ಗಣೇಶ್ ಸ್ಮಾರ್ಟ್ ಸಿಟಿ ಯೋಜನೆಯ ಅನುದಾನದಲ್ಲಿ ನೂತನ ಕಟ್ಟಡ ಕಟ್ಟಲು ಶಂಕುಸ್ಥಾಪನೆ ನೆರೆವೇರಿಸಿದ್ದಾರೆ. ಆದರೆ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ತುಮಕೂರು ನಗರ, ಈ ಇಲಾಖೆಯಲ್ಲಿ ಹಿಂದೆ ಇದ್ದ ಅಧಿಕಾರಿಗಳ ನಿರ್ಲಕ್ಷ್ಯತನದಿಂದ, ಈ ಸರ್ಕಾರಿ ಜಾಗವನ್ನು ತಮ್ಮ ಇಲಾಖೆ ಹೆಸರಿಗೆ ಮಾಡಿಸಿಕೊಳ್ಳದ ಕಾರಣ, ಕೆಲವರು ಈ ಜಾಗ ನಮ್ಮದು ಎಂದು ತಕರಾರು ತೆಗೆದು ಅಂಗನವಾಡಿಯ ಜಾಗವನ್ನು ಕಬಳಿಸಲು ಮುಂದಾಗಿದ್ದಾರೆ. ಹೀಗಾಗಿ ಕಳೆದೆರಡು ವರ್ಷಗಳಿಂದ ಫಲಾನುಭವಿಗಳು ಸೂಕ್ತ ಅಂಗನವಾಡಿ ನಿರ್ಮಾಣವಾಗದೇ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಬಿಎಸ್ ಪಿ ಮುಖಂಡರು ದೂರಿದ್ದಾರೆ.
ಈ ಅಂಗನವಾಡಿ ಕೇಂದ್ರದಲ್ಲಿ 14 ಗರ್ಭಿಣಿಯರು, 4 ಜನ ಬಾಣಂತಿಯರು, 6 ತಿಂಗಳಿನಿಂದ 3 ವರ್ಷದೊಳಗಿನ 47 ಮಕ್ಕಳು, 3 ವರ್ಷದಿಂದ 6 ವರ್ಷದೊಳಗಿನ 43 ಮಕ್ಕಳು, ಹಾಜರಿ ಇರುವ 20 ಸೇರಿ ಒಟ್ಟು 100 ಮಕ್ಕಳು ಫಲಾನುಭವಿಗಳಾಗಿದ್ದಾರೆ. ಈ ಅಂಗನವಾಡಿ ಕೇಂದ್ರವನ್ನು ಪುನರ್ ಸ್ಥಾಪಿಸಲು ಸ್ಥಳೀಯರು ಸಾಕಷ್ಟು ಪ್ರಯತ್ನಪಟ್ಟರೂ ಸಾಧ್ಯವಾಗದಿದ್ದ ವೇಳೆ, ಬಹುಜನ ಸಮಾಜ ಪಾರ್ಟಿಗೆ ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಸಾಮಾಜಿಕ ಕಳಕಳಿಯ ಹಿನ್ನೆಲೆ ಪ್ರತಿಭಟನೆ ನಡೆಸಿದ ಬಿಎಸ್ ಪಿ ಮುಖಂಡರು ತುಮಕೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದೆ.
ಇನ್ನೂ ತಕ್ಷಣವೇ ಮಹಾನಗರ ಪಾಲಿಕೆ ಈ ಸಂಬಂಧ ಕ್ರಮವಹಿಸಿ ಅಂಗನವಾಡಿ ಕಟ್ಟಡ ಪುನರ್ ಸ್ಥಾಪಿಸಬೇಕು, ಇಲ್ಲವಾದಲ್ಲಿ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಉಗ್ರ ಪ್ರತಿಭಟನೆ ನಡೆಸಿ, ಸ್ಥಳೀಯರೇ ಅಂಗನವಾಡಿ ಕಟ್ಟಡದ ದುರಸ್ಥಿ ಮಾಡಿಸಿ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಬೇಕಾಗುತ್ತದೆ ಎಂದು ತೀರ್ಮಾನಿಸಲಾಗಿದೆ. ಈ ರೀತಿ ಮಾಡಿದರೆ ಅದು ಮಹಾನಗರ ಪಾಲಿಕೆ ಆಡಳಿತಕ್ಕೆ ತೀವ್ರ ಮುಖಭಂಗ ಆಗಿರುತ್ತದೆ. ಹಾಗಾಗಲು ಅವಕಾಶ ನೀಡದೇ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಬಿಎಸ್ ಪಿ ಎಚ್ಚರಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q