ಮಧುಗಿರಿ: ಕೇಂದ್ರ ಸರ್ಕಾರದ ಕೈ ಗೊಂಬೆಯಾಗಿ ಕೆಲಸ ಮಾಡುತ್ತಿರುವ ರಾಜ್ಯಪಾಲರು ಹಾಗೂ ವಿಪಕ್ಷಗಳಿಗೆ ಬುದ್ಧಿ ಕಲಿಸುವ ಕಾಲ ಬರಲಿದೆ ಎಂದು ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ತಿಳಿಸಿದರು.
ಪಟ್ಟಣದ ಉಪ ವಿಭಾಗಾಧಿಕಾರಿಗಳ ಕಾರ್ಯಾಲಯದ ಮುಂಭಾಗ ತಾಲೂಕು ಕಾಂಗ್ರೆಸ್ ಸಮಿತಿ ವತಿಯಿಂದ ರಾಜ್ಯಪಾಲರ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯದಲ್ಲಿ ವಿವಿಧ ಜನಪರ ಯೋಜನೆಗಳನ್ನು ಜಾರಿಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಸುಳ್ಳು ಆರೋಪ ಮಾಡಿ ತಪಿತಸ್ಥ ಎಂದು ಬಿಂಬಿಸಲು ಬಿಜೆಪಿಯವರು ರಾಜ್ಯಪಾಲರನ್ನು ಬಳಸಿಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರವರ ಮಾರ್ಗದರ್ಶನದಲ್ಲಿ ಇಡೀ ರಾಜ್ಯದಲ್ಲಿ ಇಂದು ಶಾಂತಿಯುತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪಕ್ಷಪಾತ ಧೋರಣೆ ಅನುಸರಿಸುತ್ತಿರುವ ರಾಜ್ಯಪಾಲರು ದೂರುದಾರರು ಅರ್ಜಿ ಕೊಟ್ಟಾಕ್ಷಣ ಮುಖ್ಯಮಂತ್ರಿಗಳಿಗೆ ನೋಟಿಸ್ ನೀಡಿದ್ದಾರೆ. ಉನ್ನತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳ ವಿರುದ್ಧ ದೂರು ನೀಡಿದರೆ ತನಿಕಾ ಸಂಸ್ಥೆಗಳ ಮೂಲಕ ತನಿಖೆ ನಡೆಸಿ ನೋಟಿಸ್ ನೀಡಬೇಕು. ಇಂತಹ ರಾಜ್ಯಪಾಲರನ್ನು ಬಳಸಿಕೊಂಡು ಮುಖ್ಯಮಂತ್ರಿಗಳಿಗೆ ಮಸಿ ಬಳೆಯಲು ಹೊರಟಿದ್ದು, ಅದನ್ನು ಖಂಡಿಸುತ್ತೇವೆ ಎಂದರು.
ಆ.20, 26ರಂದು ಇದರ ಬಗ್ಗೆ ಹೈಕೋರ್ಟ್ ನಲ್ಲಿ ವಿಚಾರಣೆ ಇದೆ. ಅವತ್ತು ಸಿಎಂ ವಿರುದ್ಧ ಆದೇಶ ಬಂದರೆ ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಉಗ್ರವಾಗಿ ಪ್ರತಿಭಟನೆ ನಡೆಸುತ್ತದೆ ಎಂದು ಎಚ್ಚರಿಸಿದರು.
ಎಲ್ಲ ವರ್ಗದ ಬಡವರ ಪರ ಕೆಲಸ ಮಾಡುತ್ತಿರುವ ಹಗರಣ ರಹಿತ ಮುಖ್ಯಮಂತ್ರಿಗಳಿಗೆ ಶಕ್ತಿ ತುಂಬಲು ಇಂದು ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಸಹಸ್ರ ಸಂಖ್ಯೆಯಲ್ಲಿ ಸೇರಿದ್ದಾರೆ ಎಂದ ಅವರು1998 ರಲ್ಲೇ ಮುಡ ಬೈಲಾ ಪ್ರಕಾರ ಸಿದ್ದರಾಮಯ್ಯನವರು ನಿವೇಶನಗಳನ್ನು ಪಡೆದುಕೊಂಡಿದ್ದಾರೆ.
ಜಿ.ಟಿ.ದೇವೇಗೌಡ ಮತ್ತು ಎಚ್.ಡಿ.ದೇವೇಗೌಡ ಕುಟುಂಬದವರು ಕೂಡ ಮುಡಾದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನಿವೇಶನಗಳನ್ನು ಪಡೆದಿದ್ದು, ಇಂದು ಸಿದ್ದರಾಮಯ್ಯನವರ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.
ಜಿ.ಪಂ. ಮಾಜಿ ಸದಸ್ಯರಾದ ಶಾಂತಲಾ ರಾಜಣ್ಣ ಮಾತನಾಡಿ, 40 ವರ್ಷಗಳ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕಿ ಇಲ್ಲದ ರಾಜಕಾರಣಿಯಾಗಿರುವ ಸಿದ್ದರಾಮಯ್ಯನವರನ್ನು ಕುತಂತ್ರದಿಂದ ಸಿಕ್ಕಿಹಾಕಿಸಲು ಬಿಜೆಪಿ– ಜೆಡಿಎಸ್ ನವರು ಕಿತೂರಿ ನಡೆಸಿದ್ದಾರೆ. ರಾಜ ಭವನ ಎಂದರೆ ಕಾನೂನು ಪರಿಪಾಲನೆ ಮಾಡುವ ಕೇಂದ್ರವಾಗಿದೆ. ಈಗಿನ ರಾಜ್ಯಪಾಲರು ಕಾನೂನಿನ ಬಗ್ಗೆ ತಿಳುವಳಿಕೆ ಇಲ್ಲದವರಂತೆ ವರ್ತಿಸುತ್ತಿದ್ದು, ಕೇಂದ್ರ ಸರ್ಕಾರ ಈ ಕೂಡಲೇ ರಾಜ್ಯಪಾಲರನ್ನು ವಾಪಸ್ ಕರೆಸಿಕೊಂಡು ನೂತನ ರಾಜ್ಯಪಾಲರನ್ನು ರಾಜ್ಯಕ್ಕೆ ನೇಮಕ ಮಾಡಲಿ ಎಂದು ಆಗ್ರಹಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಎನ್.ಗೋಪಾಲಯ್ಯ, ಆದಿ ನಾರಾಯಣ ರೆಡ್ಡಿ, ಪುರಸಭೆ ಮಾಜಿ ಅಧ್ಯಕ್ಷ ಎನ್.ಗಂಗಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು, ಮುಖಂಡರುಗಳಾದ ಎಂ.ಎಸ್. ಮಲ್ಲಿಕಾರ್ಜುನಯ್ಯ, ಟಿ. ರಾಮಣ್ಣ, ಪಿ. ಸಿ. ಕೃಷ್ಣಾರೆಡ್ಡಿ, ಮಿಡಿಗೇಶಿ ರಾಜಗೋಪಾಲ್, ಆರ್. ಕೆ. ಧ್ರುವ ಕುಮಾರ್, ಶಫೀಕ್, ಸಿದ್ದಾಪುರ ರಂಗ ಶಾಮಣ್ಣ, ಚಂದ್ರಮ್ಮ, ಇಂದಿರಾ ದೇನಾ ನಾಯಕ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು. ಪಟ್ಟಣದ ಡಾ.ಬಿ. ಆರ್. ಅಂಬೇಡ್ಕರ್ ವೃತ್ತದಿಂದ ನೂರಾರು ಕಾರ್ಯಕರ್ತರು ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನು ಕುರಿಕೊಂಡು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಉಪ ವಿಭಾಗಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ವರದಿ: ಅಬಿದ್, ಮಧುಗಿರಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q