ಅನಿಲ್ ಅಂಬಾನಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಹಣ ದುರುಪಯೋಗದ ಪ್ರಕರಣದಲ್ಲಿ ಐದು ವರ್ಷಗಳ ಕಾಲ ಷೇರು ಮಾರುಕಟ್ಟೆಯಿಂದ ಅವರನ್ನು ನಿಷೇಧಿಸಲಾಗಿದೆ. ಮಾರುಕಟ್ಟೆ ನಿಯಂತ್ರಕ ಸೆಬಿ(Securities and Exchange Board of India) ಅನಿಲ್ ಅಂಬಾನಿಗೆ ಶಾಕ್ ನೀಡಿದ್ದು, ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
ರಿಲಯನ್ಸ್ ಹೋಮ್ ಫೈನಾನ್ಸ್ ನ ಮಾಜಿ ಅಧ್ಯಕ್ಷ ಅನಿಲ್ ಅಂಬಾನಿ ಸೇರಿದಂತೆ ಒಟ್ಟು 24 ಉದ್ಯಮಿಗಳನ್ನು ಸೆಕ್ಯೂರೆಟೀಸ್ ಮಾರ್ಕೆಟ್ ನಿಂದ ನಿಷೇಧ ಮಾಡಲಾಗಿದೆ. ಅಲ್ಲದೇ ರಿಲಯನ್ಸ್ ಹೋಮ್ ಫೈನಾನ್ಸ್ ಅನ್ನು ಆರು ತಿಂಗಳ ಕಾಲ ನಿಷೇಧಿಸಲಾಗಿದ್ದು, ದಂಡ ವಿಧಿಸಲಾಗಿದೆ.
ಇನ್ನು ಅನಿಲ್ ಅಂಬಾನಿಗೆ 25 ಕೋಟಿ ರೂಪಾಯಿ ದಂಡದ ಜೊತೆಗೆ ಐದು ವರ್ಷಗಳ ಅವಧಿಗೆ ಸೆಕ್ಯುರಿಟೀಸ್ ಮಾರುಕಟ್ಟೆಯೊಂದಿನ ಸಹಭಾಗಿತ್ವವನ್ನು ನಿಷೇಧಿಸಲಾಗಿದೆ. ಜೊತೆಗೆ ಇತರ ಅಧಿಕಾರಿಗಳಿಗೂ ಕೂಡ ಈ ಪ್ರಕರಣದಲ್ಲಿ ದಂಡ ವಿಧಿಸಲಾಗಿದೆ.
ಪಿಟಿಐ ವರದಿಯ ಪ್ರಕಾರ, ಅನಿಲ್ ಅಂಬಾನಿ ಆರ್ ಎಚ್ ಎಫ್ ಎಲ್ ನ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿಗಳ ನೆರವಿನೊಂದಿಗೆ, ತನಗೆ ಸಂಬಂಧಿಸಿದ ಸಂಸ್ಥೆಗಳಿಗೆ ಸಾಲದ ನೆಪದಲ್ಲಿ ನೀಡಿರುವ ಹಣದಲ್ಲಿ ವಂಚಿಸಿದ್ದಾರೆ ಎಂದು ಸೆಬಿಯ ತನಿಖೆಯಿಂದ ತಿಳಿದು ಬಂದಿದೆ. ಈ ಬಗ್ಗೆ ಸೆಬಿಯು 222-ಪುಟಗಳ ಸುಧೀರ್ಘ ಆದೇಶದಲ್ಲಿ ನಡೆದ ಅವ್ಯವಹಾರಗಳನ್ನು ವಿವರಿಸಿದೆ.
ರಿಲಾಯನ್ಸ್ ಹೋಮ್ ಫೈನಾನ್ಸ್ ಸಂಸ್ಥೆ ಸಾವಿರಾರು ಕೋಟಿ ರೂಪಾಯಿ ಮೊತ್ತದ ಜಿಪಿಸಿ (ಗ್ಯಾರಂಟೀಡ್ ಪೇಮೆಂಟ್ ಕ್ರೆಡಿಟ್) ಸಾಲಗಳನ್ನು ವಿತರಿಸಿದೆ. ಆದರೆ, ಸಾಲ ತೀರಿಸುವ ಯಾವುದೇ ಪ್ರಮುಖ ಆದಾಯ ಇಲ್ಲದ ಸಣ್ಣಪುಟ್ಟ ಸಂಸ್ಥೆಗಳಿಗೆ ಕೂಡ ಈ ಸಾಲಗಳನ್ನು ನೀಡಲಾಗಿತ್ತು.
ಯಾವುದೇ ಅಡಮಾನ ಅಥವಾ ಸೆಕ್ಯೂರಿಟಿಯನ್ನಾಗಲೀ ಯಾವುದನ್ನೂ ಪಡೆಯದೆಯೇ, ನಿಯಮಗಳನ್ನು ಉಲ್ಲಂಘಿಸಿ ಸಾಲ ನೀಡಲಾಗಿತ್ತು. ಆರ್ ಎಚ್ ಎಫ್ ಎಲ್ ನಲ್ಲಿ ಸಾಲ ಕೊಡುವ ಮುನ್ನ ಆಂತರಿಕವಾಗಿ ಕ್ರೆಡಿಟ್ ರೇಟಿಂಗ್ಸ್ ಪರಿಶೀಲಿಸಲಾಗುತ್ತದೆ. ಈ ನಿಯಮ ಪಾಲಿಸದೇ ನೇರವಾಗಿ ಸಾಲ ಮಂಜೂರು ಮಾಡಲಾಗಿತ್ತು.
ಈ ವಹಿವಾಟಿನ ಹಿಂದಿನ ಉದ್ದೇಶಗಳ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿದೆ. ಅಲ್ಲದೇ ಆರ್ ಎಚ್ ಎಫ್ ಎಲ್ ಗ್ರೂಪ್ ಮುಖ್ಯಸ್ಥರಾದ ಅನಿಲ್ ಅಂಬಾನಿ ನೇರವಾಗಿ ಪ್ರಭಾವ ಬೀರಿ ಈ ಸಾಲಗಳನ್ನು ಮಂಜೂರು ಮಾಡಿಸಿರುವುದು ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q