ಶ್ರೀ ರಾಮಕೃಷ್ಣ ಸೇವಾಶ್ರಮ ಪಾವಗಡ ಹಾಗೂ ಇನ್ಫೋಸಿಸ್ ಫೌಂಡೇಷನ್ ಸಹಕಾರದೊಂದಿಗೆ ಕಳೆದ ಮೂರು ತಿಂಗಳುಗಳಿಂದ ಉತ್ತರ ಕರ್ನಾಟಕ ಹಾಗೂ ಕೇರಳದ ವಯನಾಡು ಪ್ರದೇಶಗಳಲ್ಲಿ ಪ್ರವಾಹ ಪರಿಹಾರ ಯೋಜನೆಯನ್ನು ಸ್ವಾಮಿ ಜಪಾನಂದಜೀ ಮಹಾರಾಜ್ ರವರ ನೇತೃತ್ವದಲ್ಲಿ ಯಶಸ್ವಿಯಾಗಿ ಮುಗಿಸಿದ್ದು, ಇದೀಗ ಆಂಧ್ರಪ್ರದೇಶದ ವಿಜಯವಾಡ ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ಪರಿಹಾರ ಕಾರ್ಯ ನೆರವೇರಿಸಲು ಸೆ.23ರಿಂದ 26ರವರೆಗೆ ವಿಜಯವಾಡ ಪ್ರದೇಶದಲ್ಲಿ ಪರಿಹಾರ ಕಾರ್ಯ ನೆರವೇರಿಸಲು ಸ್ವಾಮಿ ವಿವೇಕಾನಂದ ತಂಡದೊಂದಿಗೆ ಜ್ಯ ಸ್ವಾಮಿ ಜಪಾನಂದಜೀ ಮಹಾರಾಜ್ ರವರು ತೆರಳುತ್ತಿದ್ದಾರೆ.
ಮೊದಲನೇ ಹಂತದಲ್ಲಿ ಸರಿಸುಮಾರು ಎರಡು ಸಾವಿರ ಸಂತ್ರಸ್ತರಿಗೆ ವಿಜಯವಾಡದ ಅತ್ಯಂತ ದುಃಸ್ಥಿತಿಯಲ್ಲಿರುವ ಹಾಗೂ ಪ್ರವಾಹದಿಂದ ತತ್ತರಿಸಿರುವ ಪ್ರದೇಶಗಳಿಗೆ ಪರಿಹಾರ ನೀಡಲು ಆಂಧ್ರಪ್ರದೇಶದ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಸತ್ಯಕುಮಾರ್ ಯಾದವ್ ಹಾಗೂ ಸ್ಥಳೀಯ ಮುಖಂಡರುಗಳು ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಸ್ಥೆಯ ಕಾರ್ಯಕರ್ತರ ಮನವಿಯ ಮೇರೆಗೆ ಈ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ.
ಸ್ವಾಮಿ ಜಪಾನಂದಜೀ ಮಹಾರಾಜ್ ರವರ ಕಾರ್ಯವೈಖರಿಯನ್ನು ಅರಿತಿರುವ ಆಂಧ್ರಪ್ರದೇಶ ಸರ್ಕಾರದ ಧುರೀಣರುಗಳಾದ ಮುಖ್ಯಮಂತ್ರಿಗಳು, ನಾ.ರಾ.ಲೋಕೇಶ್, ಘನತೆವೆತ್ತ ಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳಾದ ಪವನ್ ಕಲ್ಯಾಣ್ ರವರ ಪೂರ್ಣ ಸಹಕಾರದಿಂದ ಈ ಯೋಜನೆಯನ್ನು ಕೈಗೊಳ್ಳಲಾಗುತ್ತಿದೆ ಎಂದು ಸ್ವಾಮೀಜಿಯವರು ತಿಳಿಸಿದ್ದಾರೆ.
ಮೊದಲನೇ ಹಂತದ ಪ್ರಾರಂಭೋತ್ಸವವನ್ನು ವಿಜಯವಾಡದ ಅತ್ಯಂತ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಪ್ರದೇಶಗಳಿಂದ ಆರಂಭವಾಗುತ್ತಿದೆ. ಇದರ ಪ್ರಾರಂಭೋತ್ಸವವನ್ನು ಆರೋಗ್ಯ ಸಚಿವರಾದ ಸತ್ಯಕುಮಾರ್ ಯಾದವ್ ರವರಿಂದ ಉದ್ಘಾಟಿಸಲ್ಪಡುತ್ತಿದೆ. ಸ್ಥಳೀಯ ಶಾಸಕರುಗಳು, ಕಲೆಕ್ಟರ್, ಹಾಗೂ ಇತರ ಅಧಿಕಾರಿ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮಕ್ಕೆ ಆಂಧ್ರಪ್ರದೇಶದ ಶ್ರೀ ರಾಮಕೃಷ್ಣ ಸೇವಾಶ್ರಮದ ಸಂಯೋಜಕರಾದ, ಹಿರಿಯ ವಕೀಲರು ಹಾಗೂ ಕಡಪ ಜಿಲ್ಲಾ ಬಿ.ಜೆ.ಪಿ. ಘಟಕದ ಅಧ್ಯಕ್ಷರೂ ಆದ ಸತೀಶ್ ಚಂದ್ರರವರು ಈ ಯೋಜನೆಗೆ ಪೂರ್ಣ ಸಹಕಾರ ನೀಡುತ್ತಿದ್ದಾರೆ.
ಶ್ರೀ ರಾಮಕೃಷ್ಣ ಸೇವಾಶ್ರಮ ಕಳೆದ 35 ವರ್ಷಗಳಿಂದ ಮುಖ್ಯವಾಗಿ ದಕ್ಷಿಣ ಭಾರತದ ಆರು ರಾಜ್ಯಗಳಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾದ ಸಂದರ್ಭಗಳಲ್ಲೆಲ್ಲಾ ಸೇವಾ ಯೋಜನೆಗಳನ್ನು ತತ್ಕ್ಷಿಣ ಕೈಗೊಂಡು ಸಂತ್ರಸ್ತರ ನೆರವಿಗೆ ಆಶ್ರಯಧಾತರಾಗಿ ಸೇವೆ ಸಲ್ಲಿಸುತ್ತಿರುವುದು ಗಮನಾರ್ಹ. ಸ್ವಾಮಿ ಜಪಾನಂದಜೀ ಮಹಾರಾಜ್, ಸ್ವಾಮಿ ವಿವೇಕಾನಂದ ಸ್ವಯಂಸೇವಾ ತಂಡ, ಸಮರ್ಪಣ ಇನ್ಫೋಸಿಸ್ ಸಿ.ಎಸ್.ಆರ್. ಬೆಂಗಳೂರು, ಮಮತ ಇನ್ಫೋಸಿಸ್ ಸಿ.ಎಸ್.ಆರ್. ಹೈದರಾಬಾದ್ ರವರ ಸಹಕಾರ ಅತ್ಯಮೂಲ್ಯವಾದುದಾಗಿದೆ. ಈ ಯೋಜನೆಯ ಮಾರ್ಗದರ್ಶನ ಪರಮ ಪೂಜ್ಯ ಸ್ವಾಮಿ ಜಪಾನಂದಜೀ ಮಹಾರಾಜ್ ರವರದ್ದು. ಅವರ ಕಾರ್ಯದಕ್ಷತೆ ಹಾಗೂ ಶ್ರದ್ಧೆ, ಅರ್ಪಣಾ ಮನೋಭಾವನೆ ಹಾಗೂ ಮತ್ತೆಲ್ಲದಕ್ಕಿಂತ ಮಿಗಿಲಾಗಿ ಮಾನವೀಯತೆಯ ಮೌಲ್ಯಗಳನ್ನು ಅನುಷ್ಠಾನರೂಪಕ್ಕೆ ತರಲು ಸ್ವಾಮೀಜಿಯವರು ಅಹರ್ನಿಷಿ ದುಡಿಯುತ್ತಿದ್ದಾರೆ.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296