ಸರಗೂರು: ಕರ್ನಾಟಕ ಲೋಕಾಯುಕ್ತ ಇನ್ಸ್ಪೆಕ್ಟರ್ ಅಶೋಕ್ ಕುಮಾರ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಾರ್ವಜನಿಕ ದೂರು ಸ್ವೀಕಾರ ಕಾರ್ಯಕ್ರಮದಲ್ಲಿ ಪ್ರಚಾರದ ಕೊರತೆಯಿಂದಾಗಿ ಬೆರೆಣಿಕೆಯಷ್ಟು ಮಂದಿ ಸಾರ್ವಜನಿಕರು ಮಾತ್ರ ಭಾಗಿಯಾಗಿದ್ದರು.
ಇದರಿಂದಾಗಿ ವಿವಿಧ ಇಲಾಖೆಗಳಿಗೆ ಕೇವಲ 29 ಅರ್ಜಿಗಳು ಮಾತ್ರ ಸಲ್ಲಿಕೆಯಾದವು. ಹೀಗಾಗಿ ಬೇಸರಗೊಂಡ ಸಾರ್ವಜನಿಕರು ತಾಲೂಕು ಆಡಳಿತದ ವಿರುದ್ಧ ರೊಚ್ಚಿಗೆದ್ದು, ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ತಾಲೂಕು ಆಡಳಿತ ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಆಯೋಜಿಸಿದ್ದ ದೂರು ಸ್ವೀಕಾರ ಕಾರ್ಯಕ್ರಮದ ಶುರುವಿನಲ್ಲಿ ಕೇವಲ 8–10 ಮಂದಿ ಸಾರ್ವಜನಿಕರು ಮಾತ್ರ ಬಂದಿದ್ದರು. ಇನ್ನುಳಿದಂತೆ ಅಧಿಕಾರಿಗಳೇ ಹೆಚ್ಚು ಮಂದಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಹಾಕಲಾದ ಕುರ್ಚಿಗಳು ಖಾಲಿಯಾಗಿದ್ದವು.
ಬೆಳಗ್ಗೆ 11ಕ್ಕೆ ಆರಂಭವಾದ ಕಾರ್ಯಕ್ರಮ ಮಧ್ಯಾಹ್ನ 2 ಗಂಟೆಗೆ ಗಲಾಟೆ, ಗದ್ದಲದ ನಡುವೆಯೇ ಮುಕ್ತಾಯವಾಯಿತು. ಕಂದಾಯ ಇಲಾಖೆ ಆಡಳಿತಾಧಿಕಾರಿಗಳು ಕಾಡಂಚಿನ ಗ್ರಾಮಗಳ ಜನರಿಗೆ ಸರಿಯಾದ ಮಾಹಿತಿಯನ್ನು ನೀಡಿಲ್ಲ. ಸಾರ್ವಜನಿಕರು ಕುಂದು ಕೊರತೆಗಳ ಸಭೆ ಮಾಡಬೇಕಾದ ತಾಲೂಕು ಆಡಳಿತ ಅಧಿಕಾರಿಗಳ ಸಭೆ ನಡೆಸುತ್ತಿದೆ ಎಂದು ಆರೋಪಿಸಿದ ಸಂಘ ಸಂಸ್ಥೆಗಳ ಮುಖಂಡರು ತಹಶೀಲ್ದಾರ್ ಅವರನ್ನು ಪ್ರಶ್ನಿಸಿದರು. ಇದಕ್ಕೆ ತಹಶೀಲ್ದಾರ್ ರುಕಿಯಾ ಬೇಗಂ ಅವರು ಕಾರ್ಯಕ್ರಮದ ಕುರಿತು ಪ್ರಚಾರ ಮಾಡುವಂತೆ ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಲಾಗಿತ್ತು ಎಂದು ಸಮಜಾಯಿಸಿ ನೀಡಿದರು.
ಲೋಕಾಯುಕ್ತ ಇನ್ಸ್ಪೆಕ್ಟರ್ ಅಶೋಕ್ ಕುಮಾರ್ ಮಾತನಾಡಿ, ಅಧಿಕಾರಿಗಳು ಸಾರ್ವಜನಿಕರ ಕೆಲಸಗಳಿಗೆ ಸಾರ್ವಜನಿಕರಿಂದ ಯಾವುದೇ ರೀತಿಯ ಬೇಡಿಕೆಗಳನ್ನು ಇಡಬಾರದು. ಸಾರ್ವಜನಿಕರ ಕೆಲಸಗಳನ್ನು ವಿಳಂಬ ಮಾಡುವುದು. ಲಂಚಕ್ಕೆ ಬೇಡಿಕೆ ಇಡುವುದು ಅಪರಾಧ. ಸರಕಾರಿ ಇಲಾಖೆಗಳಲ್ಲಿಯೂ ಪಾರದರ್ಶಕತೆ ಕಾಪಾಡಿಕೊಳ್ಳುವುದು ಅವಶ್ಯಕತೆಯಾಗಿದೆ ಎಂದು ತಿಳಿಸಿದರು.
ಮನುಗನಹಳ್ಳಿ ಗ್ರಾಪಂ ಉಪಾಧ್ಯಕ್ಷ ಲಂಕೆ ರಮೇಶ್ ಮಾತನಾಡಿ, ಜಮೀನಿನ ಮಾಲೀಕ ಸ್ವಾಧೀನದಲ್ಲಿ ಇದ್ದರು. ಕಂದಾಯ ಇಲಾಖೆ ಅಧಿಕಾರಿಗಳು ಬದುಕಿರುವ ವ್ಯಕ್ತಿಗೆ ಮರಣ ಹೊಂದಿದ್ದಾನೆ ಎಂದು ಪತ್ರ ನೀಡಿ ಬೇರೆಯವರಿಗೆ ನಾಲ್ಕು ಎಕರೆ ಜಮೀನನ್ನು ಖಾತೆ ಮಾಡಿದ್ದಾರೆ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಇನ್ಸ್ಪೆಕ್ಟರ್ ಅಶೋಕ್ ಕುಮಾರ್, ತಾಲೂಕಿನ ಕಂದಾಯ ಇಲಾಖೆ ತಹಶೀಲ್ದಾರ್ ಮತ್ತು ಆರ್ ಐ ಹಾಗೂ ವಿಎ ಅಧಿಕಾರಿಗಳು ಸೂಕ್ತ ಕ್ರಮಕ್ಕಾಗಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ಸರಗೂರು ಪಟ್ಟಣದ ಸಣ್ಣ ಸ್ವಾಮಿ, ಕೂಡಗಿ ಗೋವಿಂದರಾಜು, ಯಶವಂತಪುರ ಶಿವಲಿಂಗಯ್ಯ, ಹೂವಿನಕೊಳ ಮಹೇಶ್, ಇಟ್ನ ರಾಜಣ್ಣ ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಸರಗೂರು ಶಿವಣ್ಣ ಸೇರಿದಂತೆ ಇನ್ನಿತರರು ಅರ್ಜಿಗಳನ್ನು ಸಲ್ಲಿಸಿ ಮಾತನಾಡಿದರು.
ಮನೆ ಮಂಜೂರು, ನಿವೇಶನ ಹಂಚಿಕೆ ವಿವಾದ, ಸಾಗುವಳಿ ಪತ್ರ ವಿತರಣೆ, ಜಮೀನು ಅಳತೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಾರ್ವಜನಿಕರಿಂದ 29 ಅರ್ಜಿಗಳು ಸಲ್ಲಿಕೆಯಾದವು, ಕಂದಾಯ ಇಲಾಖೆ 16, ಸರ್ವೆ ಇಲಾಖೆ 5, ಪಟ್ಟಣ ಪಂಚಾಯಿತಿಗೆ 2, ಅರಣ್ಯ ಇಲಾಖೆ 1, ತಾಲೂಕು ಪಂಚಾಯಿತಿ ೪, ಪಿಡಿಒ ೧ ಅರ್ಜಿ ಸಲ್ಲಿಕೆಯಾದವು. ತಹಸೀಲ್ದಾರ್ ರುಕೀಯಾ ಬೇಗಂ, ಲೋಕಾಯುಕ್ತ ಇನ್ಸ್ ಪೆಕ್ಟರ್ ರೂಪಶ್ರೀ, ಸಿಬ್ಬಂದಿಗಳಾದ ವೀಣಾ, ಗೋಪಿ, ಮೋಹನ್ ಗೌಡ, ತ್ರಿವೇಣಿ, ಲೋಕೇಶ್ ರಾಜ್ ಅರಸ್, ನೇತ್ರಾವತಿ, ಪರಶುರಾಮ್ ಸೇರಿದಂತೆ ಇಲಾಖಾಧಿಕಾರಿಗಳು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q