ತುಮಕೂರು: ಜಿಲ್ಲೆಯಾದ್ಯಂತ ಅಕ್ಟೋಬರ್ 21 ರಿಂದ ನವೆಂಬರ್ 20ರವರೆಗೆ ಹಸು, ಎಮ್ಮೆ, ಹಂದಿ ಸೇರಿ ಎಲ್ಲಾ ಜಾನುವಾರುಗಳಿಗೆ ಕಾಲು–ಬಾಯಿ ಜ್ವರ ಲಸಿಕೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪಶುಪಾಲಕರ ಮನೆ-ಮನೆಗೆ ಭೇಟಿ ನೀಡಿ ಲಸಿಕೆ ನೀಡಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಸಂಜೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 5 ಲಕ್ಷ ಜಾನುವಾರುಗಳಿದ್ದು, ಪಶುಪಾಲನಾ ಇಲಾಖಾ ಸಿಬ್ಬಂದಿ, ಹಾಲು ಉತ್ಪಾದಕ ಸಹಕಾರ ಸಂಘಗಳ ಸಿಬ್ಬಂದಿ, ಮೈತ್ರಿ ಕಾರ್ಯಕರ್ತರು ಹಾಗೂ ಪಶುಸಖಿಯರು ಮನೆ-ಮನೆಗೆ ಭೇಟಿ ನೀಡಿ ಜಾನುವಾರುಗಳಿಗೆ ಶೇ.100ರಷ್ಟು ಲಸಿಕೆ ನೀಡಬೇಕು ಎಂದು ತಿಳಿಸಿದರು.
ಲಸಿಕೆ ನೀಡುವುದರಿಂದ ಜಾನುವಾರುಗಳಲ್ಲಿ ಕಂಡು ಬರುವ ಕಾಲುಬಾಯಿ ಜ್ವರವನ್ನು ನಿಯಂತ್ರಿಸಬಹುದು. ಈ ನಿಟ್ಟಿನಲ್ಲಿ ಲಸಿಕಾ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಎಲ್ಲಾ ರೈತರು, ಪಶುಪಾಲಕರು, ಜಾನುವಾರು ಸಾಕಾಣಿಕೆದಾರರಿಗೆ ಅರಿವು ಮೂಡಿಸಬೇಕು ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರು (ಆಡಳಿತ) ಡಾ.ಗಿರೀಶ್ ಬಾಬು ರೆಡ್ಡಿ, ತುಮುಲ್ ಅಧಿಕಾರಿಗಳು ಹಾಗೂ ಎಲ್ಲಾ ತಾಲ್ಲೂಕುಗಳ ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ) ಮತ್ತಿತರರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q