ಪುಣೆ: ಸಾಕು ನಾಯಿಯನ್ನು ಮರಕ್ಕೆ ನೇತುಹಾಕಿ ಕೊಂದ ಆರೋಪದ ಮೇಲೆ ತಾಯಿ–ಮಗನ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಮುಲ್ಶಿ ತಹಸಿಲ್ನ ಪಿರಂಗುಟ್ ಪ್ರದೇಶದಲ್ಲಿ ಘಟನೆ ನಡೆದಿದೆ. ಪ್ರಕರಣ ಸಂಬಂಧ ಪ್ರಭಾವತಿ ಜಗತಾಪ್ ಮತ್ತು ಅವರ ಪುತ್ರ ಓಂಕಾರ್ ಜಗತಾಪ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಘಟನೆ ಕುರಿತು ಶಿವಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದು, ಕೃತ್ಯಕ್ಕೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪುಣೆ ನಗರ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಕೃತ್ಯಕ್ಕೆ ಸಂಬಂಧಿಸಿದಂತೆ ಮಿಷನ್ ಪಾಸಿಬಲ್ ಫೌಂಡೇಶನ್ ಎಂಬ ನಾಯಿಗಳ ಆಶ್ರಯಧಾಮ ನಡೆಸುತ್ತಿರುವ ಪ್ರಾಣಿ ಕಾರ್ಯಕರ್ತೆ ಪದ್ಮಿನಿ ಸ್ಟಂಪ್ ಅವರು ತಾಯಿ ಮತ್ತು ಮಗನ ವಿರುದ್ಧ ಪುಣೆ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.
‘ಅಕ್ಟೋಬರ್ 22ರಂದು ಪ್ರಭಾವತಿ ಅವರು ತಮ್ಮ ಸಾಕು ನಾಯಿಯ ಮೇಲೆ ಕೋಲಿನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿದ್ದರು. ಬಳಿಕ ಅವರ ಮಗ ಓಂಕಾರ್ ಆ ನಾಯಿಯನ್ನು ಮರಕ್ಕೆ ನೇತು ಹಾಕಿದ್ದಾನೆ. ಘಟನೆ ಕುರಿತು ಭಾರತೀಯ ನ್ಯಾಯ ಸಂಹಿತೆ ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ಸಂತೋಷ ಗಿರಿಗೋಸಾವಿ ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296