ನಮ್ಮ ತುಮಕೂರು ಮಾಧ್ಯಮವು ಈ ವರುಷ ತನ್ನ ಮೂರನೇ ವಾರ್ಷಿಕೋತ್ಸವವನ್ನು ಯಶಸ್ವಿಯಾಗಿ ಆಚರಿಸುತ್ತಿದ್ದು, ಈ ಸಾಧನೆ ನಮ್ಮ ಎಲ್ಲಾ ಸಹೋದ್ಯೋಗಿಗಳು, ವೀಕ್ಷಕರು ಮತ್ತು ಓದುಗರ ಬೆಂಬಲದ ಪ್ರತಿಫಲವಾಗಿದೆ. ಮೂರು ವರ್ಷಗಳ ಕಾಲದ ಈ ಪಯಣದಲ್ಲಿ ನಾವು ಹಲವು ಸವಾಲುಗಳನ್ನು ಎದುರಿಸಿದರೂ, ಪ್ರತಿ ಸವಾಲಿನ ನಂತರದ ಯಶಸ್ಸು ನಮ್ಮ ಸೇವೆಗೆ ನಿಮ್ಮೆಲ್ಲರ ಪ್ರೋತ್ಸಾಹದಿಂದಲೇ ಸಾಧ್ಯವಾಯಿತು.
ಮಾಧ್ಯಮ ಕ್ಷೇತ್ರದಲ್ಲಿ ಸ್ಪರ್ಧೆ, ಹಲವು ಸವಾಲುಗಳ ನಡುವೆಯೂ, ತಾಜಾ ಸುದ್ದಿಗಳು, ಸತ್ಯಾಸತ್ಯತೆ, ನಿಷ್ಠೆ ಮತ್ತು ಸಾಮಾಜಿಕ ಬದ್ಧತೆಯೊಂದಿಗೆ ಅಪಾರ ಜನರಿಗೆ ತಲುಪಿದ್ದೇವೆ ಎನ್ನುವ ಸಂತೃಪ್ತಿ ನಮಗಿದೆ. ಈ ಮೂರು ವರ್ಷಗಳಲ್ಲಿ ನಮ್ಮತುಮಕೂರು ಮಾಧ್ಯಮ ನೊಂದವರ ಕಣ್ಣು ಒರಸಿದೆ, ಸಾರ್ವಜನಿಕರ ಮೂಲಭೂತ ಸಮಸ್ಯೆಗಳನ್ನು ಪೂರೈಸುವುದು ಸರ್ಕಾರ, ಜಿಲ್ಲಾಡಳಿತದ ಜವಾಬ್ದಾರಿ ಅನ್ನೋದನ್ನ ಸಾರಿ ಹೇಳಿದ್ದೇವೆ. ಸಾಮಾಜಿಕ ಸಂಘಟನೆಗಳ ಹೋರಾಟಕ್ಕೆ ನಮ್ಮತುಮಕೂರು ಮಾಧ್ಯಮ ಬಲವಾಗಿ ಬೆಂಬಲಿಸಿದೆ. ಸಂವಿಧಾನಾತ್ಮಕ ಧ್ಯೇಯಗಳನ್ನು ಮೈಗೂಡಿಸಿಕೊಂಡು ಮಾಧ್ಯಮ, ಕಾನೂನಿಗೆ ಅನುಸಾರವಾಗಿ ಕಾರ್ಯನಿರ್ವಹಿಸುತ್ತಿದೆ.
ಈ ಮೂರು ವರ್ಷದ ಪ್ರಯಾಣದಲ್ಲಿ ಮಾಧ್ಯಮವು ಬೆದರಿಕೆಗಳಿಗೆ ಬಗ್ಗಿಲ್ಲ, ಆಮಿಷಗಳಿಗೆ ಕೈಯೊಡ್ಡಿಲ್ಲ ಎನ್ನುವುದನ್ನು ಹೇಳಲು ನಮಗೆ ಅತ್ಯಂತ ಹೆಮ್ಮೆಯಾಗುತ್ತದೆ. ತುಮಕೂರು ಜಿಲ್ಲೆಯ ಸಮಸ್ಯೆಗಳನ್ನು ಎತ್ತಿ ಹಿಡಿದು, ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿಯಾಗಿದೆ. ಜನರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಮನೆಮನೆಗಳಿಗೂ ಮಾಹಿತಿಗಳನ್ನು ಮಾಧ್ಯಮ ನೀಡುತ್ತಿದೆ. ರೈತರು, ವಿದ್ಯಾರ್ಥಿಗಳು, ಕಾರ್ಮಿಕರು, ಅಶಕ್ತರು ಎಲ್ಲರ ಪರವಾದ ಮಾಧ್ಯಮವಾಗಿ ನಮ್ಮತುಮಕೂರು ಮೂಡಿ ಬಂದಿದೆ. ಮುಂದೆಯೂ ಇನ್ನಷ್ಟು ಕೆಲಸಗಳನ್ನು ಮಾಡಲು ಮಾಧ್ಯಮ ತಂಡ ಸಿದ್ಧವಾಗಿದೆ.
ನಮ್ಮವರಾದ ವರದಿಗಾರರು ಮತ್ತು ಸಂಪಾದಕೀಯ ತಂಡದ ನಿಷ್ಠೆ, ತಾಂತ್ರಿಕ ತಂಡದ ಶ್ರಮ, ಹಾಗೂ ಸಮುದಾಯದ ಆಪ್ತ ಬೆಂಬಲ, ನಮ್ಮ ಈ ಮಾರ್ಗಚಾಲನೆಯನ್ನು ಯಶಸ್ವಿಗೊಳಿಸಿವೆ. ಪತ್ರಿಕೋದ್ಯಮದ ಪ್ರಾಮಾಣಿಕತೆಯನ್ನು ಉಳಿಸಿ, ಮಾಧ್ಯಮ ಹೇಗೆ ಜನಸ್ನೇಹಿಯಾಗಿರಬಹುದು ಎನ್ನುವ ಹೊಸ ಪರಿಕಲ್ಪನೆಯನ್ನು ನಮ್ಮತುಮಕೂರು ತಂದಿದೆ. ನಮ್ಮ ತುಮಕೂರು ಮಾಧ್ಯಮವು ಮುಂದಿನ ದಿನಗಳಲ್ಲಿ ಇನ್ನಷ್ಟು ಜನಮನದ ಸೆಳೆತವಾಗಬೇಕು ಎಂಬುದು ನನ್ನ ಅಪೇಕ್ಷೆ. ನಿಮ್ಮ ಪ್ರೀತಿಯ ಬೆಂಬಲವು ಸದಾ ಹೀಗೆ ಉಳಿಯಲಿ, ನಾವು ಮಾಡುತ್ತಿರುವ ಪ್ರಯತ್ನಗಳಿಗೆ ಉತ್ತೇಜನ ನೀಡಲಿ ಎಂದು ಬಯಸುತ್ತೇವೆ. ಈಗಾಗಲೇ ನಮ್ಮತುಮಕೂರು ಮಾಧ್ಯಮಕ್ಕೆ ನೂರಾರು ಸಂಖ್ಯೆಯಲ್ಲಿ ಜನರು, ಸಾರ್ವಜನಿಕರು, ಗಣ್ಯರು ಶುಭಾಶಯಗಳನ್ನು ಕಳುಹಿಸಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳು. ಹಾಗೆಯೇ ನಿರಂತರವಾಗಿ ಶುಭಾಶಯಗಳು ಇನ್ನೂ ಹರಿದು ಬರುತ್ತಲೇ ಇದೆ. ಆದರೆ ನಾವು ಸಮಾರೋಪ ಮಾಡಲೇ ಬೇಕಾದ ಕಾರಣ ಎಲ್ಲವನ್ನು ಪ್ರಕಟಿಸಲು ಸಾಧ್ಯವಾಗಿಲ್ಲ ಎನ್ನುವುದಕ್ಕೆ ನಾವು ವಿಷಾದಿಸುತ್ತೇವೆ. ಜೊತೆಯಾಗಿ ಸಾಗೋಣ.. ಎನ್ನುತ್ತಾ ಎಲ್ಲರಿಗೂ ಧನ್ಯವಾದಗಳು…
–ಜಿ.ಎಲ್.ನಟರಾಜು
ಪ್ರಧಾನ ಸಂಪಾದಕರು, ನಮ್ಮ ತುಮಕೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q