ಬೆಂಗಳೂರು: ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ, ಜಗದೀಶ್ ಶೆಟ್ಟರ್ ಮತ್ತು ಈಗಿನ ನಿಮ್ಮ ಮಿತ್ರ ಪಕ್ಷವಾದ ಜೆಡಿಎಸ್ ನ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ನೂರಾರು ರೈತ ಕುಟುಂಬಗಳ ಆಸ್ತಿಗಳನ್ನು ವಕ್ಪ್ ಬೋರ್ಡ್ ಗೆ ಖಾತೆ ಬದಲಾಯಿಸಿದ ದಾಖಲೆಗಳನ್ನು ನಾವು ಬಿಡುಗಡೆ ಮಾಡುತ್ತೇವೆ ಎಂದು ಸಿಎಂ ಸಿದ್ದದರಾಮಯ್ಯ ಹೇಳಿದ್ದಾರೆ.
ವಿಜಯೇಂದ್ರ ಅವರೇ, ಪ್ರಧಾನಿ ನರೇಂದ್ರ ಮೋದಿ ಅವರ ಬದಲಿಗೆ ತಾವೇ ಬಹಿರಂಗ ಚರ್ಚೆಗೆ ಸಿದ್ಧ ಎಂದು ನೀವು ಹಾಕಿರುವ ಸವಾಲನ್ನು ಗಮನಿಸಿದೆ. ನನ್ನ ಜೊತೆ ಚರ್ಚೆ ನಡೆಸುವ ಮೊದಲು ನಿಮ್ಮದೇ ಪಕ್ಷದ ನಾಯಕರಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ಅವರ ಜೊತೆ ಒಂದು ಸುತ್ತು ಚರ್ಚೆ ಮಾಡಿಕೊಂಡು ಬನ್ನಿ ಎಂದರು.
ನಿಮ್ಮ ಪೂಜ್ಯ ತಂದೆಯವರನ್ನು ಮುಖ್ಯಮಂತ್ರಿ ಮಾಡಲು ನೀವು ಬಿಜೆಪಿ ಹೈಕಮಾಂಡ್ ಗೆ ಎರಡು ಸಾವಿರ ಕೋಟಿ ರೂಪಾಯಿ ನೀಡಿದ್ದೀರಿ..!! ನಿಮ್ಮನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಲು ಇನ್ನೂ ಒಂದಷ್ಟು ಕೋಟಿ ರೂಪಾಯಿ ನೀಡಿದ್ದೀರಿ..!! ಎಂದು ನಿಮ್ಮ ನಾಯಕರೇ ಆರೋಪಿಸಿದ್ದಾರೆ. ಮೊದಲು ಅವರ ಜೊತೆ ಚರ್ಚೆ ಮಾಡಿ ಮುಗಿಸಿ ಬನ್ನಿ ಎಂಬುದಾಗಿ ಹೇಳಿದ್ದಾರೆ.
ನೀವು ಕಮಿಷನ್ ಹೊಡೆಯುವುದರಲ್ಲಷ್ಟೇ ಪರಿಣತರು ಎಂದು ನಿಮ್ಮದೇ ಪಕ್ಷದ ನಾಯಕರಾದ ಯತ್ನಾಳ್, ಜಾರಕಿಹೊಳಿ, ಹೆಚ್.ವಿಶ್ವನಾಥ್ ಅವರು ಹೇಳುತ್ತಲೇ ಇದ್ದಾರೆ. ಇಲ್ಲಿಯ ವರೆಗೆ ಅವರ ಆರೋಪಗಳಿಗೆ ನೀವು ಪ್ರತಿಕ್ರಿಯೆ ನೀಡದಿರುವುದು ಮತ್ತು ಇಂತಹ ಆರೋಪ ಮಾಡುತ್ತಿರುವವರ ವಿರುದ್ಧ ನಿಮ್ಮ ಪಕ್ಷದ ಹೈಕಮಾಂಡ್ ಕೂಡಾ ಕ್ರಮ ಕೈಗೊಳ್ಳದಿರುವುದನ್ನು ನೋಡಿದರೆ ಈ ಆರೋಪಗಳನ್ನು ನೀವು ಒಪ್ಪಿಕೊಂಡಂತೆ ಕಾಣಿಸುತ್ತಿದೆ, ಇದು ನಿಜವೇ? ಎಂದು ಪ್ರಶ್ನಿಸಿದ್ದಾರೆ.
ಈ ಎಲ್ಲ ಬೆಳವಣಿಗೆಗಳನ್ನು ನೋಡಿದರೆ ನಿಮ್ಮ ಪದಚ್ಯುತಿಗೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ನೀಡಿರುವ ಡಿಸೆಂಬರ್ ತಿಂಗಳ ಗಡುವು ನಿಜವಾಗುತ್ತಿರುವಂತೆ ಕಾಣುತ್ತಿದೆ. ನಮ್ಮ ಸರ್ಕಾರದ ಬಗ್ಗೆ ಚಿಂತಿಸುವ ಬದಲಿಗೆ ಮೊದಲು ನಿಮ್ಮ ಕುರ್ಚಿ ಭದ್ರ ಪಡಿಸಿಕೊಳ್ಳುವ ಯೋಚನೆ ಮಾಡಿ ಎಂದು ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


