ತುಮಕೂರು: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮೂವರು ಅಪರಾಧಿಗಳಿಗೆ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ(ಪೋಕ್ಸೋ) ನ್ಯಾಯಾಲಯವು ಜೀವಾವಧಿ ಶಿಕ್ಷೆ(ಸಾಯುವವರೆಗೂ ಶಿಕ್ಷೆ) ವಿಧಿಸಿ ತೀರ್ಪು ನೀಡಿದ್ದು, ಭಾರೀ ಮೊತ್ತದ ದಂಡವನ್ನು ವಿಧಿಸಲಾಗಿದೆ.
ಈ ಘಟನೆ ತುರುವೇಕೆರೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ನಡೆದಿದ್ದು, 14 ವರ್ಷ ವಯಸ್ಸಿನ ನೊಂದ ಬಾಲಕಿ ರೇಷನ್ ತರಲು ಅಂಗಡಿಗೆ ಹೋಗುತ್ತಿದ್ದ ಸಂದರ್ಭದಲ್ಲಿ 2ನೇ ಆರೋಪಿಯಾಗಿರುವ ರತ್ನಮ್ಮ ಅಲಿಯಾಸ್ ನಾಗರತ್ನಮ್ಮ ಪರಿಚಯಿಸಿಕೊಂಡಿದ್ದಳು. ಬಳಿಕ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಳು. ನೊಂದ ಬಾಲಕಿಗೆ ಅಜ್ಜಿ ಮಾತ್ರವೇ ಇರುವುದನ್ನು ತಿಳಿದ ರತ್ನಮ್ಮ, ಆಕೆಯನ್ನು ತನ್ನ ಮನೆಯಲ್ಲಿ ಕೂಡಿ ಹಾಕಿದ್ದಳು. ಕೊಲೆ ಬೆದರಿಕೆ ಹಾಕಿದ್ದಳು. ಅಲ್ಲದೇ ನಿನ್ನ ಅಜ್ಜಿಯನ್ನೂ ಸಾಯಿಸುವುದಾಗಿ ಬೆದರಿಸಿದ್ದಳು. ಬಳಿಕ 3ನೇ ಆರೋಪಿ ನಾಗರತ್ನಳನ್ನು ತನ್ನ ಮನೆಗೆ ಕರೆಸಿಕೊಂಡು 1ನೇ ಆರೋಪಿ ನಾಗೇಂದ್ರ(45) ಎಂಬಾತನನ್ನು ಮನೆಗೆ ಕರೆಸಿಕೊಂಡು ನೊಂದ ಬಾಲಕಿಯ ಮೇಲೆ ಹಲವಾರು ಬಾರಿ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.
ಬಳಿಕ 2ನೇ ಆರೋಪಿ ರತ್ನಮ್ಮ ಮತ್ತು 3ನೇ ಆರೋಪಿ ನಾಗರತ್ನ ನೊಂದ ಬಾಲಕಿಯನ್ನು ಬೆದರಿಸಿ ವೇಶ್ಯಾವಾಟಿಕೆಗೆ ಬಿಟ್ಟು ಅದರಿಂದ ಹಣ ವಸೂಲಿ ಮಾಡಿದ್ದಾರೆ. ನೊಂದ ಬಾಲಕಿ ಅಪ್ರಾಪ್ತ ವಯಸ್ಕಳು, ಪರಿಶಿಷ್ಟ ಜಾತಿಗೆ ಸೇರಿದವಳು ಎಂದು ತಿಳಿದಿದ್ದರೂ, ಆಕೆಯ ಮೇಲೆ 1 ತಿಂಗಳುಗಳ ಕಾಲ ನಾಗೇಂದ್ರ ಬಲವಂತವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. 2 ಮತ್ತು 3ನೇ ಆರೋಪಿಗಳು ಆಕೆಯನ್ನು ವೇಶ್ಯಾವಾಟಿಕೆಗೆ ತಳ್ಳಿದ್ದಾರೆ ಎಂದು ಈ ಪ್ರಕರಣದ ತನಿಖಾಧಿಕಾರಿಗಳಾದ ಚಂದ್ರಶೇಖರ್ ಕೆ. ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದರು.
ಈ ಪ್ರಕರಣದ ವಿಚಾರಣೆ ನಡೆಸಿದ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ(ಪೋಕ್ಸೋ) ನ್ಯಾಯಾಲಯವು, ಸಾಕ್ಷಿಗಳಿಂದ 1ನೇ ಆರೋಪಿ ನಾಗೇಂದ್ರ, 2ನೇ ಆರೋಪಿ ರತ್ನಮ್ಮ, ಮೂರನೇ ಆರೋಪಿ ನಾಗರತ್ನರವರ ಮೇಲೆ ಮಾಡಲಾದ ಆರೋಪ ಸಾಬೀತಾದ ಕಾರಣ. 1ನೇ ಆರೋಪಿ ನಾಗೇಂದ್ರನಿಗೆ ಜೀವಾವಧಿ ಶಿಕ್ಷೆ(ಸಾಯುವವರೆಗೆ) ಮತ್ತು 6 ಲಕ್ಷ ರೂಪಾಯಿಗಳ ದಂಡ, 2ನೇ ಆರೋಪಿ ರತ್ನಮ್ಮಳಿಗೆ ಜೀವಾವಧಿ(ಸಾಯುವವರೆಗೆ) ಮತ್ತು 1 ಲಕ್ಷ ರೂ. ದಂಡ, ಮೂರನೇ ಆರೋಪಿ ನಾಗರತ್ನಮ್ಮಳಿಗೆ ಜೀವಾವಧಿ ಶಿಕ್ಷೆ(ಸಾಯುವವರೆಗೂ) ಹಾಗೂ 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
1ರಿಂದ 3ನೇ ಆರೋಪಿಗಳಿಂದ ಅಪ್ರಾಪ್ತ ಬಾಲಕಿಗೆ 8 ಲಕ್ಷ ರೂ.ಗಳ ದಂಡದ ಪರಿಹಾರ ಮೊತ್ತ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ನೊಂದ ಬಾಲಕಿಗೆ 5 ಲಕ್ಷ ರೂ.ಗಳ ಪರಿಹಾರ ಒಟ್ಟಾರೆಯಾಗಿ 13 ಲಕ್ಷ ರೂ.ಗಳ ಪರಿಹಾರವನ್ನು ನೀಡುವಂತೆ ಘನ ನ್ಯಾಯಾಲಯದ ನ್ಯಾಯಾಧೀಶರು ಆದೇಶಿಸಿದ್ದಾರೆ.
ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಆಶಾ. ಕೆ.ಎಸ್. ಅವರು ವಾದ ಮಂಡಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q