ತುಮಕೂರು: ಜಿಲ್ಲೆಯ ಕೊರಟಗೆರೆ ತಾಲ್ಲೂಕು ವ್ಯಾಪ್ತಿಯ ಎಲ್ಲಾ 24 ಗ್ರಾಮ ಪಂಚಾಯತಿಗಳಲ್ಲಿ ನವಂಬರ್ 27ರಿಂದ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಗಳ ಹಾಗೂ ಅನೈರ್ಮಲ್ಯ ಶೌಚಾಲಯಗಳ ಸಮೀಕ್ಷೆ ನಡೆಸಲಾಗುವುದು ಎಂದು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಅಪೂರ್ವ ಸಿ.ಅನಂತರಾಮು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಗಳ ಹಾಗೂ ಅನೈರ್ಮಲ್ಯ ಶೌಚಾಲಯಗಳ ಸಮೀಕ್ಷೆ ನಡೆಸಲು ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದ್ದು, ವೇಳಾಪಟ್ಟಿಯನ್ವಯ ನವೆಂಬರ್ 27ರಂದು ಕೊರಟಗೆರೆ ತಾಲ್ಲೂಕಿನ ಗ್ರಾಮೀಣ ಭಾಗದ ಅನೈರ್ಮಲ್ಯ ಶೌಚಾಲಯಗಳ ಸಮೀಕ್ಷೆ ನಡೆಸಲಾಗುವುದು. ಸಮೀಕ್ಷೆಯಲ್ಲಿ ಕಂಡು ಬಂದ ಅನೈರ್ಮಲ್ಯ ಶೌಚಾಲಯಗಳ ನಿರ್ಮಾಣ ಮತ್ತು ನಿರ್ವಹಣೆ ಮಾಡುತ್ತಿರುವ ಮಾಲೀಕರಿಗೆ ಅನೈರ್ಮಲ್ಯ ಶೌಚಾಲಯಗಳನ್ನು ನಾಶಪಡಿಸಿ ಕೂಡಲೇ ನೈರ್ಮಲ್ಯ ಶೌಚಾಲಯಗಳನ್ನಾಗಿ ಮಾರ್ಪಡಿಸಲು ಡಿಸೆಂಬರ್ 5ರೊಳಗಾಗಿ ನೋಟೀಸ್ ಜಾರಿ ಮಾಡಲಾಗುವುದು.
ಸಮೀಕ್ಷೆಯಲ್ಲಿ ಗ್ರಾಮೀಣ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನೈರ್ಮಲ್ಯ ಶೌಚಾಲಯಗಳು ಕಂಡು ಬರದೆ ಇದ್ದಲ್ಲಿ ಅಂತಹ ಪ್ರದೇಶಗಳನ್ನು ಅನೈರ್ಮಲ್ಯ ಶೌಚಾಲಯಗಳ ರಹಿತ ಪ್ರದೇಶ ಎಂದು ಡಿಸೆಂಬರ್ 20ರಂದು ಘೋಷಿಸಲಾಗುವುದು.
ಅನೈರ್ಮಲ್ಯ ಶೌಚಾಲಯಗಳು ಕಂಡು ಬರದ ಪ್ರದೇಶಗಳಲ್ಲಿ ಅನೈರ್ಮಲ್ಯ ಶೌಚಾಲಯಗಳಲ್ಲಿ ಮಲ ಸ್ವಚ್ಛ ಮಾಡುವ ವೃತ್ತಿಯಲ್ಲಿರುವ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳನ್ನು ಸ್ವಯಂ ಘೋಷಣೆ ಮಾಡಿಕೊಳ್ಳಲು 2025ರ ಜನವರಿ 5ರಂದು ಕ್ಯಾಂಪ್‌ಗಳನ್ನು ಆಯೋಜಿಸಿ ಸ್ವಯಂ ಘೋಷಣೆಗೆ ಅರ್ಜಿ ಸಲ್ಲಿಸುವ ಮಾಹಿತಿಯನ್ನು ನೀಡಲಾಗುವುದು. ಸ್ವಯಂ ಘೋಷಣೆ ಮಾಡಿಕೊಳ್ಳಲು ಅರ್ಜಿ ಸಲ್ಲಿಸುವ ಅರ್ಜಿದಾರರ ಅರ್ಜಿಗಳನ್ನು ಪರಿಶೀಲಿಸಲು ಸಮೀಕ್ಷಾ ಸಮಿತಿಯ ಅಧಿಕಾರಿಗಳು ಜನವರಿ 25ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಅರ್ಜಿಗಳ ಪರಿಶೀಲನೆ ನಂತರ ಸ್ವಯಂ ಘೋಷಿಸಿಕೊಂಡ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸಂಬಂಧಪಟ್ಟ ಗ್ರಾಮ ಪಂಚಾಯತಿಗಳ ಕಚೇರಿ ಸೂಚನಾ ಫಲಕದಲ್ಲಿ ಫೆಬ್ರವರಿ 10ರಂದು ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗುವುದು.
ಪಟ್ಟಿ ಪ್ರಕಟಿಸಿದ ನಂತರ ಯಾವುದೇ ಆಕ್ಷೇಪಣೆಗಳು ಬಾರದೆ ಇದ್ದಲ್ಲಿ ಫೆಬ್ರವರಿ 17ರಂದು ಅಂತಿಮ ಆಯ್ಕೆ ಪಟ್ಟಿಯನ್ನು ಅನುಮೋದನೆಗಾಗಿ ಜಿಲ್ಲಾ ಮಟ್ಟದ ಸಮೀಕ್ಷಾ ಸಮಿತಿಗೆ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q