ತುಮಕೂರು: ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯಿಂದ ಸುಮಾರು 30,000 ಫಲಾನುಭವಿಗಳ ಪೌತಿಖಾತೆ, ಹಕ್ಕು ಪತ್ರ ವಿತರಣೆ, ಪಿಂಚಣಿ ಸೌಲಭ್ಯಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ಮುಖ್ಯಮಂತ್ರಿಗಳ ಭೇಟಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.40ಕ್ಕೂ ಹೆಚ್ಚು ಮಳೆಯಾಗಿದೆ. ಅಧಿಕ ಮಳೆಯಿಂದ 3 ಮಂದಿ ಮರಣ ಹೊಂದಿದ್ದು, ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. ಮರಣ ಹೊಂದಿರುವವರ ಕುಟುಂಬಕ್ಕೆ ಈಗಾಗಲೇ ತಲಾ 5ಲಕ್ಷ ರೂ.ಗಳ ಪರಿಹಾರ ನೀಡಲಾಗಿದೆ. ಪ್ರಾಣ ಹಾನಿಯಾದ ಜಾನುವಾರು ಮಾಲೀಕರಿಗೂ ಪರಿಹಾರ ಹಣ ವಿತರಿಸಲಾಗಿದ್ದು, ಯಾವುದೇ ಪರಿಹಾರ ಹಣ ಬಾಕಿ ಇರುವುದಿಲ್ಲವೆಂದು ತಿಳಿಸಿದರು.
ಜಿಲ್ಲೆಯಲ್ಲಿ ಹಿಂಗಾರು ಮಳೆಯಿಂದ 200 ಹೆಕ್ಟೇರ್ ಪ್ರದೇಶದ 327 ರೈತರ ಬೆಳೆ ಹಾನಿಯಾಗಿದೆ. ಈಗಾಗಲೇ ಬೆಳೆ ಹಾನಿಗೊಳಗಾದ ರೈತರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಪರಿಹಾರಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಜಿಲ್ಲೆಯ 1.30ಲಕ್ಷ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಸವಲತ್ತುಗಳ ವಿತರಣೆ ಮಾಡಲು ಯೋಜಿಸಲಾಗಿದೆಯಲ್ಲದೆ, ಸುಮಾರು 2000 ಕೋಟಿ ರೂ. ವೆಚ್ಚದಲ್ಲಿ ಸವಲತ್ತುಗಳ ವಿತರಣೆ, ಉದ್ಘಾಟನೆಗೆ ಸಿದ್ಧವಿರುವ ಕಾಮಗಾರಿ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಮಾಹಿತಿ ನೀಡಿದರು.
ಕೃಷಿ ಇಲಾಖೆಯ 100 ಕೋಟಿ, ತೋಟಗಾರಿಕೆ–55 ಕೋಟಿ, ಮಹಿಳಾ ಸ್ವಸಹಾಯ ಸಂಘಗಳ-40 ಕೋಟಿ, ಜಲ್ ಜೀವನ್ ಮಿಷನ್–202 ಕೋಟಿ, ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗದ 250 ಕೋಟಿ, ನಗರಾಭಿವೃದ್ಧಿಗಾಗಿ ಅಮೃತ್ ಯೋಜನೆಯಡಿ 250 ಕೋಟಿ, ಲೋಕೋಪಯೋಗಿ ಇಲಾಖೆ 238 ಕೋಟಿ, ಸಮಾಜ ಕಲ್ಯಾಣ ಇಲಾಖೆ 35 ಕೋಟಿ ಸೇರಿ ವಿವಿಧ ಇಲಾಖೆಗಳ ಸುಮಾರು 40 ಕೋಟಿ ರೂ. ಸೇರಿ ಒಟ್ಟು 2000 ಕೋಟಿ ರೂ.ಗಳ ಸವಲತ್ತು ವಿತರಣೆ, ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಗೆ ಜಿಲ್ಲೆ ಸಿದ್ಧವಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ರಾಜಣ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿಗಳಾದ ಗೋಟೂರು ಶಿವಪ್ಪ, ಸಪ್ತಶ್ರೀ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q