ಬೆಂಗಳೂರು: ಇಬ್ಬರು ಮಕ್ಕಳನ್ನು ಹೆತ್ತ ತಾಯಿಯೇ ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸುಬ್ರಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ಗಂಡುಮಗು ಶಂಭು ಸಾಹು(7) ಮತ್ತು ಹೆಣ್ಣುಮಗು ಶ್ರೇಯಾ(3) ತಮ್ಮ ತಾಯಿಯಿಂದಲೇ ಕೊಲೆಯಾದ ಮಕ್ಕಳಾಗಿದ್ದಾರೆ.
ಜಾರ್ಖಂಡ್ ಮೂಲದ ಸುನೀಲ್ ಸಾಹು–ಮಮತಾ ಸಾಹು ದಂಪತಿ ತನ್ನಿಬ್ಬರು ಮಕ್ಕಳೊಂದಿಗೆ ಎಂಟು ತಿಂಗಳ ಹಿಂದೆಯಷ್ಟೇ ನಗರಕ್ಕೆ ಬಂದು ಉತ್ತರಹಳ್ಳಿಯ ಮುನಿಸ್ವಾಮಿ ಲೇಔಟ್ ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದರು.
ಸುನೀಲ್ ಸಾಹು ಓಲಾ ಆಟೋ ಚಾಲಕ ವೃತ್ತಿ ಮಾಡುತ್ತಿದ್ದರು. ಈ ನಡುವೆ ಸುನೀಲ್ ಮೊಬೈಲ್ ನಲ್ಲಿ ಜಾರ್ಖಂಡ್ ಯುವತಿ ಜೊತೆ ಮಾತನಾಡುತ್ತಿದ್ದುದನ್ನು ಪತ್ನಿ ಮಮತಾ ಗಮನಿಸಿ ಜಗಳವಾಡಿದ್ದಾಳೆ.
ನಿನ್ನೆ ರಾತ್ರಿ ಇದೇ ವಿಚಾರಕ್ಕೆ ದಂಪತಿ ನಡುವೆ ಜಗಳವಾಗಿದೆ. ಆ ವೇಳೆ ಸುನೀಲ್ ಸಾಹು ಹೊರಗೆ ಹೋಗಿದ್ದಾನೆ. ಆ ಸಂದರ್ಭದಲ್ಲಿ ತನ್ನಿಬ್ಬರು ಮಕ್ಕಳನ್ನು ದಾರದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ನಂತರ ಹಗ್ಗದಿಂದ ನೇಣು ಬಿಗಿದುಕೊಳ್ಳಲು ಯತ್ನಿಸಿದ್ದಾಳೆ. ಆ ವೇಳೆ ಹಗ್ಗ ತುಂಡಾಗಿದೆ. ನಂತರ ಚಾಕುವಿನಿಂದ ಕುತ್ತಿಗೆ ಕೊಯ್ದುಕೊಂಡು ಕುಸಿದು ಬಿದ್ದಿದ್ದಾಳೆ.
ಹೊರಗೆ ಹೋಗಿದ್ದ ಪತಿ ರಾತ್ರಿ 10.30ರ ಸುಮಾರಿಗೆ ಮನೆಗೆ ಬಂದಾಗ ಮಕ್ಕಳು ಕೊಲೆಯಾಗಿರುವುದು ಕಂಡುಬಂದಿದೆ. ಪತ್ನಿ ರಕ್ತದ ಮಡುವಿನಲ್ಲಿ ಇರುವುದು ಗಮನಿಸಿ ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿದ್ದು, ಮಮತಾ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಮಕ್ಕಳು ಸಾವನ್ನಪ್ಪಿರುವ ಬಗ್ಗೆ ಸುನೀಲ್ ಸಾಹು ಸುಬ್ರಹಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296