ಚಿಕ್ಕಮಗಳೂರು: ಗ್ಯಾರಂಟಿ ಯೋಜನೆಗಳು ಬಡವರ ಬದುಕಿಗೆ ಭರವಸೆ ತಂದಿದೆ. ಈ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲುವಲ್ಲಿ ಚಿಕ್ಕಮಗಳೂರು ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನಗಳಿಸಿದೆ ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ. ರೇವಣ್ಣ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರವು ಸಮಾಜದ ಹಿಂದುಳಿದ ವರ್ಗದ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಅವರ ಜೀವನ ಮಟ್ಟ ಸುಧಾರಿಸಲು ಹಲವಾರು ಜನಪರ ಯೋಜನೆಗಳನ್ನು ಜಾರಿ ಮಾಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿವೆ. ಈ ಕಾರ್ಯಕ್ಕೆ ಬೆಂಬಲವಾಗಿ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಯುವ ನಿಧಿ ಹಾಗೂ ಶಕ್ತಿ ಯೋಜನೆಗಳು ಸಹಕರಿಸುತ್ತಿವೆ ಎಂದರು.
ಸರ್ಕಾರದವರು ಅಭಿವೃದ್ಧಿ ಕಾರ್ಯಗಳೊಂದಿಗೆ ಗ್ಯಾರಂಟಿ ಯೋಜನೆಗಳಿಗಾಗಿ ಸುಮಾರು ರೂ.52 ಸಾವಿರ ಕೋಟಿಗಳಷ್ಟು ಹಣ ಹಂಚಿಕೆ ಮಾಡಿದೆ. ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಸುಮಾರು 1.22 ಕೋಟಿ ಫಲಾನುಭವಿಗಳು ಯೋಜನೆಯ ಫಲವನ್ನು ಪಡೆದಿದ್ದಾರೆ ಹಾಗೂ ರೂ.32,665 ಗಳಷ್ಟು ಹಣವನ್ನು ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ. ಜಿಲ್ಲೆಯಲ್ಲಿ 2.62 ಲಕ್ಷ ಮಹಿಳೆಯರು ನೋಂದಣಿಯಾಗಿದ್ದು, ಒಟ್ಟು ರೂ.6,57,02,10,000 ಹಣ ಯೋಜನೆಗೆ ಬಳಕೆಯಾಗಿದೆ. ಹಾಗೂ ಗೃಹಜ್ಯೋತಿ ಯೋಜನೆಯಲ್ಲಿ ರಾಜ್ಯದಲ್ಲಿ ೧.೬೧ ಕೋಟಿ ಫಲಾನುಭವಿಗಳಿಗೆ ಯೋಜನೆ ಲಭ್ಯವಾಗಿದ್ದು, ಇದಕ್ಕೆ ೧೧ ಸಾವಿರದ ೩೧ ಕೋಟಿಗಳಷ್ಟು ಹಣ ವ್ಯಯವಾಗಿದೆ. ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಲ್ಲಿ ೩ ಲಕ್ಷ ಫಲಾನುಭವಿಗಳಿದ್ದು, ಒಟ್ಟು ರೂ. ೧೫೮ ಕೋಟಿಗಳಷ್ಟು ಹಣ ಯೋಜನೆಗೆ ಬಳಕೆಯಾಗಿದೆ ಎಂದರು.
ರಾಜ್ಯದಲ್ಲಿ ೫೫.೪೭ ಕೋಟಿ ಅನ್ನಭಾಗ್ಯ ಯೋಜನೆ ಫಲಾನುಭವಿಗಳಿದ್ದು ಒಟ್ಟು ೯ ಸಾವಿರದ ೧೦೪ ಕೋಟಿ ವೆಚ್ಚವಾಗಿದೆ. ಜಿಲ್ಲೆಯಲ್ಲಿ ೧.೦೯ ಕೋಟಿ ಫಲಾನುಭವಿಗಳಿಗೆ ಯೋಜನೆ ಲಭ್ಯವಾಗಿದ್ದು, ಒಟ್ಟು ೧೭೯ ಕೋಟಿ ಯೋಜನೆಗೆ ವೆಚ್ಚವಾಗಿದೆ. ಶಕ್ತಿ ಯೋಜನೆಯಲ್ಲಿ ರಾಜ್ಯದಲ್ಲಿ ಒಟ್ಟು ೩೩೬ ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ ಹಾಗೂ ಜಿಲ್ಲೆಯಲ್ಲಿ ಒಟ್ಟು ೨,೯೦,೭೦,೦೬೪ ಮಹಿಳೆಯರು ಪ್ರಯಾಣಿಸಿದ್ದು, ಒಟ್ಟು ರೂ. ೧೧೦೫೫೩೯೨೪೨ ರಷ್ಟು ಹಣ ಯೋಜನೆಗೆ ಬಳಕೆಯಾಗಿದೆ. ಯುವನಿಧಿ ಯೋಜನೆಯಡಿಯಲ್ಲಿ ರಾಜ್ಯದಲ್ಲಿ ೧.೮೧ ಕೋಟಿ ಯುವ ಫಲಾನುಭವಿಗಳಿದ್ದಾರೆ. ಒಟ್ಟು ರೂ. ೧೪೯ ಗಳಷ್ಟು ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ ಹಾಗೂ ಜಿಲ್ಲೆಯಲ್ಲಿ ಒಟ್ಟು ೩೨೫೭ ಯುವ ಫಲಾನುಭವಿಗಳಿದ್ದು, ಒಟ್ಟು ರೂ ೨,೫೪,೫೮,೦೦೦ ಗಳಷ್ಟು ಹಣ ಈ ಯೋಜನೆಗೆ ಬಳಕೆಯಾಗಿದೆ ಎಂದು ತಿಳಿಸಿದ ಅವರು ಯೋಜನೆಯಿಂದ ವಂಚಿತರಾಗಿರುವ ಫಲಾನುಭವಿಗಳು ಅರ್ಜಿ ಸಲ್ಲಿಸಿ ಯೋಜನೆಯ ಫಲ ಪಡೆದುಕೊಳ್ಳಿ ಎಂದು ತಿಳಿಸಿದರು.
ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಮಾತನಾಡಿ ಗ್ಯಾರಂಟಿ ಯೋಜನೆಗಳಿಂದ ಜನರು ಸ್ವಾವಲಂಭಿ ಹಾಗೂ ಸಂತೋಷದ ಜೀವನವನ್ನು ನಿರ್ವಹಿಸುತ್ತಿದ್ದಾರೆ. ಜನರ ಕೈಗೆ ಹಣ ನೀಡುವುದರಿಂದ ಅವರು ತಮ್ಮ ಅಗತ್ಯತೆಗಳಿಗೆ ವ್ಯಯ ಮಾಡುತ್ತಾರೆ. ಇದರಿಂದ ವ್ಯಾಪಾರ ವಹಿವಾಟುಗಳು ಹೆಚ್ಚುತ್ತವೆ. ಉತ್ಪಾದನೆ ಹೆಚ್ಚುತ್ತದೆ. ಉತ್ಪಾದನೆಗೆ ಮಾನವ ಸಂಪನ್ಮೂಲದ ಅವಶ್ಯಕತೆ ಇರುವುದರಿಂದ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುತ್ತವೆ ಹಾಗೂ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಉಪಯುಕ್ತವಾಗಿದೆ. ಆರ್ಥಿಕ ವ್ಯವಹಾರಗಳು ಹೆಚ್ಚುವುದರಿಂದ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಆದಾಯವು ಹೆಚ್ಚಿ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರಿಯಾಗುತ್ತವೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಉತ್ತಮ ಬದುಕನ್ನು ಗುರಿಯಾಗಿರಿಸಿಕೊಂಡು ಈ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಜೊತೆಗೆ ಮಹಿಳೆಯರು ಸ್ವಾವಲಂಬಿಗಳಾಗಿ ಜೀವಿಸಲು ಯೋಜನೆಗಳು ಸಹಕಾರಿಯಾಗಿವೆ ಎಂದ ಅವರು ಯೋಜನೆಗಳಿಂದ ವಂಚಿತರಾಗಿರುವವರನ್ನು ಗುರುತಿಸಿ ಅವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವುದಲ್ಲದೆ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಅಗತ್ಯ ಕ್ರಮವಹಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್., ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್. ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮ್ಟೆ, ಚಿಕ್ಕಮಗಳೂರು ಉಪವಿಭಾಗಾಧಿಕಾರಿ ದಲ್ಜಿತ್ ಕುಮಾರ್, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಬೆಂಗಳೂರು ಹಾಗೂ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ (ಮೈಸೂರು ವಿಭಾಗ)ದ ಉಪ ಅಧ್ಯಕ್ಷೆ ಡಾ. ಪುಷ್ಪ ಅಮರನಾಥ್, ಭದ್ರಾ ಕಾಡಾ ಶಿವಮೊಗ್ಗ ಅಧ್ಯಕ್ಷರಾದ ಡಾ. ಅಂಶುಮಂತ್, ಕ.ರಾ. ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷರಾದ ಬಿ.ಹೆಚ್. ಹರೀಶ್, ರಾಜ್ಯ ಪರಿಸರ ತಜ್ಞರ ಮೌಲ್ಯಮಾಪನ ಸಮಿತಿ ಅಧ್ಯಕ್ಷ ಎ.ಎನ್. ಮಹೇಶ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ಎಂ.ಸಿ. ಶಿವನಂದ ಸ್ವಾಮಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q