ತುಮಕೂರು: ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದೆ ಬಾಕಿ ಉಳಿದುಕೊಂಡಿರುವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಶೀಘ್ರವಾಗಿ ಇತ್ಯರ್ಥಗೊಳಿಸುವ ಉದ್ದೇಶದಿಂದ ಡಿಸೆಂಬರ್ 14ರಂದು ರಾಷ್ಟ್ರೀಯ ಲೋಕ್ ಆದಾಲತ್ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ಜಯಂತ್ ಕುಮಾರ್ ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲಯದ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಶನಿವಾರ ಮಾಧ್ಯಮ ಗೋಷ್ಠಿ ನಡೆಸಿ ಮಾತನಾಡಿದ ಅವರು, ನ್ಯಾಯಾಲಯಗಳಲ್ಲಿ ಹೆಚ್ಚುತ್ತಿರುವ ಪ್ರಕರಣಗಳನ್ನು ಕಡಿಮೆ ಮಾಡುವುದು ಮತ್ತು ಸಾರ್ವಜನಿಕರು ನ್ಯಾಯಾಲಯಗಳಿಗೆ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಲೋಕ್ ಆದಾಲತ್ ಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಲೋಕ್ ಆದಾಲತ್ನಲ್ಲಿ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 96,494 ಪ್ರಕರಣಗಳ ಪೈಕಿ 9,082 ಪ್ರಕರಣಗಳನ್ನು ಹಾಗೂ 1,13,000 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದರು.
ಲೋಕ್ ಅದಾಲತ್ ನಲ್ಲಿ ಜನಸಾಮಾನ್ಯರಿಗೆ ತ್ವರಿತ ಹಾಗೂ ವೆಚ್ಚವಿಲ್ಲದೆ ರಾಜೀ ಸಂಧಾನದ ಮೂಲಕ ಎಲ್ಲಾ ರೀತಿಯ ರಾಜಿಯಾಗಬಹುದಾದ ವ್ಯಾಜ್ಯ ಪೂರ್ವ ಹಾಗೂ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುವುದು. ಸಾರ್ವಜನಿಕರು ತಮ್ಮ ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಈ ಲೋಕ್ ಅದಾಲತ್ ನಲ್ಲಿ ಅತೀ ಶೀಘ್ರವಾಗಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ನಂತರ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಅವರು, ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಾದ ರಾಜಿಯಾಗಬಹುದಾದ ಅಪರಾಧಿಕ ಪ್ರಕರಣ, ಚೆಕ್ಕು ಅಮಾನ್ಯ, ಬ್ಯಾಂಕ್, ಮೋಟಾರು ಅಪಘಾತ ಪರಿಹಾರ ನ್ಯಾಯಾಧೀಕರಣದ ಪ್ರಕರಣ, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣ, ಕಾರ್ಮಿಕ ವಿವಾದ, ಹಾಗೂ ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮು, ವಿದ್ಯುತ್ ಹಾಗೂ ನೀರಿನ ಶುಲ್ಕ, ವೈವಾಹಿಕ / ಕುಟುಂಬ ನ್ಯಾಯಾಲಯ ಪ್ರಕರಣ(ವಿಚ್ಛೇದನ ಪ್ರಕರಣ ಹೊರತುಪಡಿಸಿ)ಗಳು, ಭೂಸ್ವಾಧೀನ, ವೇತನ ಮತ್ತು ಭತ್ಯೆಗಳಿಗೆ ಸಂಬಂಧಿಸಿದ ಸೇವಾ ಪ್ರಕರಣಗಳು ಹಾಗೂ ಪಿಂಚಣಿ, ಕಂದಾಯ ಪ್ರಕರಣ (ಜಿಲ್ಲಾ ಹಾಗೂ ಉಚ್ಛ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು ಮಾತ್ರ), ಸಿವಿಲ್ ಪ್ರಕರಣ(ಬಾಡಿಗೆ, ಅನುಭೋಗದ ಹಕ್ಕುಗಳು ನಿರ್ಬಂಧಕಾಜ್ಞೆ ದಾವೆಗಳು ಹಾಗೂ ಇತರೆ ದಾವೆಗಳು)ಗಳನ್ನು ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದರು.
ಕಾನೂನು ಸೇವಾ ಪ್ರಾಧಿಕಾರದಿಂದ ಪ್ರಸಕ್ತ ವರ್ಷದಲ್ಲಿ 3 ರಾಷ್ಟ್ರೀಯ ಲೋಕ್ ಅದಾಲತ್ ಅನ್ನು ಹಮ್ಮಿಕೊಂಡಿದ್ದು ಈವರೆಗೆ ಕೌಟುಂಬಿಕ ಕಲಹಗಳಿಂದ ವಿಚ್ಛೇದನಕ್ಕಾಗಿ ದಾಖಲಿಸಿದ್ದ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ 75ಕ್ಕೂ ಹೆಚ್ಚು ದಂಪತಿಗಳ ಪುನರ್ಮಿಲನಕ್ಕೆ ಅವಕಾಶ ಮಾಡಿಕೊಡಲಾಗಿದೆ. ರಾಜೀ ಸಂಧಾನದ ಮೂಲಕ ಪ್ರಕರಣಗಳ ವಿಲೇವಾರಿಯಲ್ಲಿ ರಾಜ್ಯದ ಮೊದಲ 5 ಸ್ಥಾನಗಳನ್ನು ಪಡೆದುಕೊಂಡಿರುವ ಜಿಲ್ಲೆಗಳಲ್ಲಿ ತುಮಕೂರು ಜಿಲ್ಲೆಯೂ ಒಂದು ಎಂದು ತಿಳಿಸಿದರು.
ಪ್ರತೀದಿನ ಜಿಲ್ಲೆಯ ಎಲ್ಲಾ ನ್ಯಾಯಲಯಗಳಲ್ಲಿ ಲೋಕ್ ಅದಾಲತ್ ಗೆ ಸಂಬಂಧಿಸಿದಂತೆ ಪೂರ್ವಭಾವಿ ಬೈಠಕ್ ಗಳು ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳ ಕಚೇರಿ ದೂರವಾಣಿ ಸಂಖ್ಯೆ 0816-2255133 ಹಾಗೂ ಮೊ.ಸಂ. 9141193959ನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q