ಹೆಚ್.ಡಿ.ಕೋಟೆ: ವಿಧಾನಸಭಾ ಕ್ಷೇತ್ರದ ಪರಿಶಿಷ್ಟ ಜಾತಿಯ ಆದಿಕರ್ನಾಟಕ ಸಮುದಾಯದ ಹಿತಚಿಂತನ ಸಭೆಯನ್ನು ಪಟ್ಟಣದ ಶಾದಿಮಹಲ್ ನಲ್ಲಿ ಕ್ಷೇತ್ರದ ಸಮುದಾಯದ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಮ್ಮುಖದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಡಾ.ಎಸ್.ಮರಿದೇವಯ್ಯ ಮಾತನಾಡಿ, ಹೆಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯ ಆದಿಕರ್ನಾಟಕ ಸಮುದಾಯದ ಮುಖಂಡರು ಒಗ್ಗಟ್ಟಿನಿಂದ ಪಕ್ಷದ ಸಂಘಟನೆ ಮಾಡಬೇಕು, ನಮ್ಮ ಸಮಾಜ ಕ್ಷೇತ್ರದಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ, ಹಾಗೆಯೇ ಸಮುದಾಯವು1952ರಿಂದ 2024ರವರೆಗೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿಕೊಂಡು ಬರುತ್ತಿದ್ದೇವೆ. ಈ ನಿಟ್ಟಿನಲ್ಲಿ ತಾಲ್ಲೂಕಿನಲ್ಲಿ ಎರಡನೇ ಬಾರಿಗೆ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಲಾಗಿದೆ. ಪ್ರತಿ ಗ್ರಾಮಗಳಲ್ಲೂ ನಮ್ಮ ಸಮಾಜ ಶೇಕಡ 90 ಹೆಚ್ಚು ಮತದಾನವನ್ನು ಮಾಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದೆ ಹಾಗೂ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸಿದ್ದೇವೆ, ಸುಮಾರು 72 ವರ್ಷಗಳಿಂದ ಹೆಚ್.ಡಿ.ಕೋಟೆ ತಾಲೂಕಿನ ಆದಿಕರ್ನಾಟಕ ಸಮಾಜಕ್ಕೆ ಕಾಂಗ್ರೆಸ್ ಪಕ್ಷ ಎಂಎಲ್ ಎ ಎಂ ಪಿ ಎಂಎಲ್ಸಿ ಟಿಕೆಟ್ ನೀಡಿರುವುದಿಲ್ಲ, ಹಾಗೆಯೇ ನಿಗಮ ಮಂಡಳಿಯ ಅಧ್ಯಕ್ಷರು ಸಹ ಇಲ್ಲಿವರೆಗೂ ನಮ್ಮ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷದಿಂದ ದೊರಕಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಗಾಗಿ ನಮ್ಮ ಸಮುದಾಯದ ಎಳ್ಗೆಗಾಗಿ ಬಲಗೈ ಸಮುದಾಯದ ನಮ್ಮ ಮುಖಂಡರಿಗೆ ಸರ್ಕಾರದ ವಿಶೇಷ ಘಟಕ ಯೋಜನೆಗಳ ಮೂಲಕ ಸರ್ಕಾರಿ ಸವಲತ್ತು ಮತ್ತು ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು, ಹಾಗೆಯೇ ಸಮುದಾಯದ ಹಿತ ಚಿಂತನೆಗಾಗಿ ದುಡಿಯುವ ಪ್ರಾಮಾಣಿಕ ವ್ಯಕ್ತಿಗಳಿಗೆ ಸರ್ಕಾರದಲ್ಲಿ ಅಧಿಕಾರ ಮತ್ತು ಸ್ಥಾನಮಾನಗಳನ್ನು ಕಲ್ಪಿಸಿ ಕೊಡಬೇಕೆಂದು ಸಂಸದರು ಹಾಗೂ ಶಾಸಕರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲು ಈ ದಿನ ಸಮುದಾಯದ ಮುಖಂಡರು ಮತ್ತು ಕಾರ್ಯಕರ್ತರ ಸಮ್ಮುಖದಲ್ಲಿ ಈ ಹಿತ ಚಿಂತನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದಂತ 300ಕ್ಕೂ ಹೆಚ್ಚು ಮುಖಂಡರು ಮತ್ತು ಕಾರ್ಯಕರ್ತರು ತಮ್ಮ ಅಭಿಪ್ರಾಯ ಮತ್ತು ಸಲಹೆ ಸೂಚನೆಗಳನ್ನು ಸಭೆಯಲ್ಲಿ ತಿಳಿಸಿದರು.
ಅನಂತರ ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಹೆಚ್.ಸಿ.ನರಸಿಂಹಮೂರ್ತಿ ಮಾತನಾಡಿ, ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ಒಬ್ಬರಿಗೆ ವಿಧಾನ ಪರಿಷತ್ ಸ್ಥಾನಮಾನ, ರಾಜ್ಯದ ನಿಗಮ ಮಂಡಳಿಗಳಲ್ಲಿ ಸ್ಥಾನಮಾನ, ರಾಜ್ಯಮಟ್ಟದ ನಿರ್ದೇಶಕರ ಸ್ಥಾನಮಾನ ಮತ್ತು ಕೆಪಿಸಿಸಿಯಲ್ಲಿ ಉನ್ನತ ಸ್ಥಾನಮಾನಗಳನ್ನು ಸಮುದಾಯದ ಮುಖಂಡರಿಗೆ ಕಲ್ಪಿಸಿ ಕೊಡುವಂತೆ ಈ ಸಭೆಯಲ್ಲಿ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಕ್ಷೇತ್ರದ ಶಾಸಕರು, ಸಂಸದರು, ಸಚಿವರು ಮತ್ತು ರಾಜ್ಯದ ಮುಖ್ಯಮಂತ್ರಿಗಳಲ್ಲಿ ನಮ್ಮ ಸಮುದಾಯವು ಒಕ್ಕೊರಲಿನಿಂದ ಮನವಿ ಮಾಡಲಾಗುವುದೆಂದು ತಿಳಿಸಿದರು.
ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಭಾಗ್ಯಲಕ್ಷ್ಮಿ ಅವರು ಮಾತನಾಡಿ, ತಾಲ್ಲೂಕಿನಲ್ಲಿ ನಮ್ಮ ಬಲಗೈ ಸಮುದಾಯವು ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ ಆದರೆ ಅಧಿಕಾರ ಸ್ಥಾನಮಾನ ಪಡೆಯುವಲ್ಲಿ ಬಹಳ ವಿರಳವಾಗಿದೆ, ಹಾಗಾಗಿ ಸಮುದಾಯದ ಬಂಧುಗಳು ಮತ್ತು ಮುಖಂಡರು ತಮ್ಮ ಸ್ವಾರ್ಥ ಚಿಂತನೆಗಳನ್ನು ಬಿಟ್ಟು ಸಮುದಾಯದ ಏಳಿಗೆಗಾಗಿ ಅಧಿಕಾರ ಮತ್ತು ಸ್ಥಾನಮಾನಗಳನ್ನು ಪಡೆಯಲು ಸಮುದಾಯವು ಒಗ್ಗೂಡಬೇಕಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಹೆಚ್.ಸಿ.ಮಂಜುನಾಥ್ ಮಾತನಾಡಿ, ಕಾಂಗ್ರೆಸ್ ಪಕ್ಷವು ತಾಲೂಕಿನಲ್ಲಿ ನಮ್ಮ ಸಮುದಾಯವನ್ನು ಕಡೆಗಣಿಸಕೂಡದು, ನಾವೆಲ್ಲರೂ ಕೂಡ ಒಗ್ಗಟ್ಟಿನಿಂದ ಸೂಕ್ತ ಸ್ಥಾನಮಾನಗಳನ್ನು ಕೇಳುವ ಉದ್ದೇಶದಿಂದ ಈ ಒಂದು ಸಭೆಯಲ್ಲಿ ಭಾಗವಹಿಸಿದ್ದೇವೆ, ಕಾಂಗ್ರೆಸ್ ಪಕ್ಷದಲ್ಲಿರುವ ನಮ್ಮ ಸಮುದಾಯದ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನಗಳನ್ನು ಕೂಡಲೇ ಕಲ್ಪಿಸಿ ಕೊಡಬೇಕೆಂದು ನಾವೆಲ್ಲರೂ ಸಂಸದರು, ಸಚಿವರು ಹಾಗೂ ಶಾಸಕರನ್ನು ಒತ್ತಾಯಿಸಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಹೆಚ್.ಸಿ.ಮಂಜುನಾಥ್, ಭಾಗ್ಯಲಕ್ಷ್ಮಿ ನಿಂಗರಾಜು, ಪುರಸಭೆ ಸದಸ್ಯ ನರಸಿಂಹಮೂರ್ತಿ, ಸಂಶೋಧಕರ ಸಂಘದ ರಾಜ್ಯಾಧ್ಯಕ್ಷ ಡಾ.ಮರಿದೇವಯ್ಯ, ಅಕ್ರಮ ಸಕ್ರಮ ಸಮಿತಿ ಸದಸ್ಯ ಬಾಲಯ್ಯ, ಸಮುದಾಯದ ಮುಖಂಡರಾದ ಸರಗೂರು ಶಿವಣ್ಣ, ಚಾ.ನಂಜುಂಡಮೂರ್ತಿ, ಭಾನುಮತಿ, ಎಪಿಎಂಸಿ ಸಿದ್ದರಾಜು, ಬೆಟ್ಟಯ್ಯ, ಮದ್ದುಮಲ್ಲಯ್ಯ, ಹೈಕೋರ್ಟಿಗೆ ಮಲ್ಲೇಶ್, ಸಿದ್ದರಾಜು ಹೂವಿನಕೋಳ, ವನಸಿರಿ ಶಂಕರ್, ಲಾಯರ್ ಶಿವರಾಜು, ಲೋಕೇಶ್, ಶಿವಲಿಂಗಯ್ಯ, ಕಾಳಸ್ವಾಮಿ, ಮಲಾರ ಶಿವಣ್ಣ, ಚೆನ್ನೀಪುರ ನಾಗರಾಜ್, ಕೆಂಪರಾಜು, ಮಾನವಿಯಕ್ಕರ್, ಪ್ರಕಾಶ್ ಹಾದನೂರು, ಮುಂತಾದ ಮುಖಂಡರು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296