ಶ್ರವಣಬೆಳಗೊಳ: ಶ್ರೀ ದಿಗಂಬರ ಜೈನ ಮಹಾಸಂಸ್ಥಾನ ಮಠದ ಹಿಂದಿನ ಪೀಠಾಧ್ಯಕ್ಷರಾಗಿದ್ದ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ನಿಷಿಧಿ ಮಂಟಪ ಲೋಕಾರ್ಪಣೆ ಸಮಾರಂಭವು ಡಿ.06 ರಂದು ನೆರವೇರಲಿದೆ ಎಂದು ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿಪಂಡಿತಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ತಿಳಿಸಿದರು.
ಪಟ್ಟಣದ ಶ್ರೀ ಕಾನಜಿಸ್ವಾಮಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರಿಗೆ ಮಾಹಿತಿ ನೀಡಿದರು.
ಶ್ರೀಕ್ಷೇತ್ರ ಶ್ರವಣಬೆಳಗೊಳದ ಅಭಿವೃದ್ಧಿಯ ಹರಿಕಾರ, ಧವಲತ್ರಯ ಗ್ರಂಥಗಳ ಅನುವಾದ ಪ್ರಕಾಶನ ಪ್ರವರ್ತಕರು, ಪ್ರಾಕೃತ ಭಾಷಾ ಪ್ರಸಾರಕರು, ಜನಕಲ್ಯಾಣ ಚಿಂತಕರು, ಚಂದ್ರಗಿರಿ ಮಹೋತ್ಸವ ಪ್ರವರ್ತಕರು, ಕ್ಷೇತ್ರದಲ್ಲಿನ 40 ಬಸದಿಗಳ ಜೀರ್ಣೋದ್ಧಾರ ಮಾಡಿಸಿದ ತೀರ್ಥ ಸಂರಕ್ಷಕರು, ಪಂಥ ರಹಿತ ಸಂತ, ಪರಮಶ್ರುತಭಕ್ತ, ಶಿಕ್ಷಣ ಪ್ರೇಮಿ, ಉತ್ತರ ಮತ್ತು ದಕ್ಷಿಣ ಭಾರತದ ಜೈನ ಸಮಾಜದ ಸೇತುವೆಯಾಗಿದ್ದ ಪ್ರಾತಃಸ್ಮರಣೀಯ ಪರಮಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರು ಐದು ದಶಕಗಳ ಕಾಲ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಶ್ರೀಕ್ಷೇತ್ರ ಶ್ರವಣಬೆಳಗೊಳವನ್ನು ವಿಶ್ವಮನ್ನಣೆಗೊಳಿಸಿರುತ್ತಾರೆ.
ಶ್ರೀಕ್ಷೇತ್ರ ಶ್ರವಣಬೆಳಗೊಳವು ತ್ಯಾಗ, ಮೈತ್ರಿ ಹಾಗೂ ಅಹಿಂಸೆಯ ಕ್ಷೇತ್ರವಾದ್ದು, ಸುಮಾರು 2300 ವರ್ಷಗಳ ಪೂರ್ವದಿಂದಲೂ ಜೈನ ಶ್ರಮಣರು ಆತ್ಮಕಲ್ಯಾಣ ಬಯಸಿ ಬಂದು ಶ್ರೀಕ್ಷೇತ್ರದಲ್ಲಿ ಮರಣದ ಮಹಾನವಮಿಯನ್ನು ಕಂಡಿದ್ದಾರೆ. ಶ್ರೀಕ್ಷೇತ್ರವು ಅಂತಿಮ ಶ್ರುತಕೇವಲಿಗಳೆನಿಸಿದ ಆಚಾರ್ಯಶ್ರೀ ಭದ್ರಬಾಹು ಸ್ವಾಮಿಗಳಿಂದ ಹಿಡಿದೂ ಪ.ಪೂ. ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳವರೆಗೂ ಎಲ್ಲಾ ಪೂಜ್ಯರುಗಳಿಂದ ಪರಮ ಪಾವಿತ್ರ್ಯವನ್ನು ಹೊಂದಿದೆ. ಗಂಗರ ಸೇನಾಧಿಪತಿ ಚಾವುಂಡರಾಯನಿಂದ ಸ್ಥಾಪಿತವಾದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯು ಜಗತ್ತಿಗೆ ಶಾಂತಿಯ ಸಂಕೇತವಾಗಿದೆ. ಗಂಗ ವಂಶದ ರಾಜರಿಂದ ಒಳಗೊಂಡು ಮೈಸೂರು ಅರಸರವರೆಗೂ ರಾಜಮನ್ನಣೆಯನ್ನು ಪಡೆದು ಬೆಳೆದು ಬಂದ ಕ್ಷೇತ್ರವಾಗಿದೆ.
ಅದೇ ಪರಂಪರೆಯಲ್ಲಿ ಕ್ರಿ.ಶ. 1970 ರಿಂದ 2023ರವರೆಗೆ ಶ್ರವಣಬೆಳಗೊಳ ದಕ್ಷಿಣಾಚಾರ್ಯ ಪೀಠದ ಪೀಠಾಧಿಪತಿಗಳಾಗಿ ಸಮಸ್ತ ಭಕ್ತ ಜನಗಳಿಗೆ ಗುರುಗಳಾಗಿದ್ದು, ಧರ್ಮದ ಪ್ರಭಾವನೆಗೈದು 2023ರ ಮಾ.23ರಂದು ಸಮಾಧಿ ಮರಣ ಹೊಂದಿದ ಮಹಾಸ್ವಾಮಿಗಳವರ ಅಂತ್ಯಕ್ರಿಯೆಯು ಶ್ರೀಮಠದ ಪರಂಪರೆಯಂತೆ ಭಟ್ಟಾರಕ ಸ್ವಾಮಿಗಳವರ ಸಮಾಧಿ ಬೆಟ್ಟದಲ್ಲಿ ನೆರವೇರಿದ್ದು, ಆ ಸ್ಥಳದಲ್ಲಿ ಶಿಲಾಮಯ ನಿಷಿಧಿ ಮಂಟಪವನ್ನು ನಿರ್ಮಾಣ ಮಾಡಲಾಗಿದೆ.
ಪೂಜ್ಯರ ಶ್ರೀಚರಣ ಪಾದುಕೆಗಳ ಪ್ರತಿಷ್ಠಾಪನೆಯೊಂದಿಗೆ ಸ್ಮರಣ ಶಾಸನ ಹಾಗೂ ನಿಷಿಧಿಮಂಟಪದ ಲೋಕಾರ್ಪಣೆಯು ಡಿ.6ರ ಶುಕ್ರವಾರ ಬೆಳಗ್ಗೆ ಗಂಟೆಗೆ ಸಮಸ್ತ ಜೈನ ಮಠಗಳ ಸ್ವಸ್ತಿಶ್ರೀ ಭಟ್ಟಾರಕ ಸ್ವಾಮಿಗಳವರು ಹಾಗೂ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳವರು, ಶ್ರೀ ಪೇಜಾವರ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು, ಶ್ರೀ ಸಿದ್ಧಗಂಗಾ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳವರು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಶಾಖಾ ಮಠದ ಪರಮಪೂಜ್ಯ ಶ್ರೀ ಶ್ರೀ ಶಂಭುನಾಥ ಮಹಾಸ್ವಾಮಿಗಳವರು ದಿವ್ಯಸಾನಿಧ್ಯದೊಂದಿಗೆ, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆಯವರ ಘನ ಉಪಸ್ಥಿತಿಯಲ್ಲಿ ಹಾಗೂ ಪರಮಪೂಜ್ಯ ಚಾರುಶ್ರೀಗಳವರಿಗೆ ಅತ್ಯಾಪ್ತರಾಗಿದ್ದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಲೋಕಾರ್ಪಣೆ ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರು, ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ, ಸಚಿವರಾದ ಡಿ.ಸುಧಾಕರ್, ಕೆ.ಎನ್.ರಾಜಣ್ಣ ಶಾಸಕರಾದ ಸಿ.ಎನ್.ಬಾಲಕೃಷ್ಣ ಹೆಚ್.ಡಿ.ರೇವಣ್ಣ, ಅಭಯ್ ಪಾಟೀಲ್, ಅಭಯ್ ಚಂದ್ರ ಜೈನ್, ಮಾಜಿ ಶಾಸಕ ಸಂಜಯ್ ಪಾಟೀಲ್, ವಿಧಾನಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಪಾಷಾ ಭಾಗವಹಿಸಲಿದ್ದಾರೆ.
ಸಹಸ್ರಾರು ಗುರುಭಕ್ತರ ಸಮ್ಮುಖದಲ್ಲಿ ಶ್ರೀ ಚರಣ ಪಾದುಕ ಸ್ಥಾಪನೆ, ಚರಣಾಭಿಷೇಕ, ಪುಷ್ಪವೃಷ್ಠಿ, ವಿನಯಾಂಜಲಿ ಹಾಗೂ ಶ್ರೀ ಅವರ ಜೀವನ ಚರಿತ್ರೆ ಒಳಗೊಂಡಿರುವ ಶಿಲಾ ಲೇಖಾ ಅನಾವರಣ ವಿವಿಧ ಧಾರ್ಮಿಕ ವಿಧಿ-ವಿಧಾನಗಳು ಮತ್ತು ಸಭಾ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ. ಸುಮಾರು ಹತ್ತು ಸಾವಿರ ಜನ ಭಕ್ತರು ಸೇರುವ ನಿರೀಕ್ಷೆ ಇದ್ದು ಭಕ್ತಾದಿಗಳೆಲ್ಲರಿಗೂ ಮಾವಿನ ಸಸಿ ನೀಡಲಾಗುವುದು ಹಾಗೂ ಭಕ್ತರೆಲ್ಲರಿಗೂ ಊಟ ಉಪಚಾರದ ವ್ಯವಸ್ಥೆ ಮಾಡಲಾಗುವುದು ಎಂದರು.
ಶ್ರೀಕ್ಷೇತ್ರ ಶ್ರವಣಬೆಳಗೊಳವು ವಿಶ್ವದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದ್ದು, ಜೈನಕಾಶಿಯೆಂದೇ ಹೆಸರಾಗಿದೆ. ಪರಮಪೂಜ್ಯ ಶ್ರೀ ಸ್ವಾಮೀಜಿಯವರ ಕಲ್ಪನೆಯಂತೆ ಶ್ರೀಕ್ಷೇತ್ರವು ವಿಶ್ವಮಟ್ಟದ ಗಮನಸೆಳೆಯಲು ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಜನಕಲ್ಯಾಣ ಯೋಜನೆಗಳು ಸೇರಿದಂತೆ, ಶ್ರವಣಬೆಳಗೊಳ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದ್ದು, ಹಂತಹಂತವಾಗಿ ಕಾರ್ಯರೂಪಕ್ಕೆ ಬರಲಿದೆ. ವಿಂಧ್ಯಗಿರಿ ಮತ್ತು ಚಂದ್ರಗಿರಿಯಲ್ಲಿ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕುಡಿಯುವ ನೀರು, ಪ್ರವಾಸಿ ಮಾಹಿತಿ ಸೇರಿದಂತೆ ಇತರೆ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ ವಿಂಧ್ಯಗಿರಿ ಮಹಾದ್ವಾರದ ಸಮೀಪದಲ್ಲಿ ನಿತ್ಯದಾಸೋಹದ ವ್ಯವಸ್ಥೆ ಮಾಡಲು ಚಿಂತನೆ ನಡೆಸಲಾಗಿದೆ ಹಾಗೂ ವಿಂಧ್ಯಗಿರಿ, ಚಂದ್ರಗಿರಿಯಂತೆ ಸ್ವಾಮೀಜಿಯವರ ನಿಷೇಧಿ ಮಂಟಪದ ಸಣ್ಣ ಬೆಟ್ಟವನ್ನು ಮೂರನೇ ಬೆಟ್ಟವಾಗಿ ಅಭಿವೃದ್ಧಿಗೊಳಿಸಲಾಗುವುದು ಎಂದು ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx