ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆಗೆ ಉತ್ತೇಜನ ನೀಡಲು ಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರ, ಔಷಧಿ ಸಿಂಪಡಣೆ, ಸರಕು ಸಾಗಾಣಿಕೆ ಸೇರಿದಂತೆ ಹಲವು ಕೃಷಿ ಕೆಲಸಗಳಿಗೆ ಬಳಕೆಯಾಗುವ ಡ್ರೋನ್ಗಳ ಖರೀದಿಗೆ ಆರ್ಥಿಕ ನೆರವು ಘೋಷಣೆ ಮಾಡಿದೆ.
ಭಾರತದಲ್ಲಿ ಕರಾರುವಾಕ್ಕಾದ ಆಧುನಿಕ ಕೃಷಿ ಪದ್ಧತಿಯ ಉತ್ತೇಜನಕ್ಕೆ ಬಲ ನೀಡುವ ಭಾಗವಾಗಿ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಕೃಷಿ ವಲಯದ ಪಾಲುದಾರರಿಗೆ ಡ್ರೋನ್ ತಂತ್ರಜ್ಞಾನವನ್ನು ಕೈಗೆಟುಕುವ ಬೆಲೆಗೆ ಸಿಗುವಂತೆ ಮಾಡಲು ಪ್ರಮುಖ ಮಾರ್ಗ ಸೂಚಿಗಳನ್ನು ಪ್ರಕಟಿಸಿದೆ.ಕೃಷಿ ಯಾಂತ್ರೀಕರಣ ಉಪಮಿಷನ್ (ಎಸ್‍ಎಂಎಎಂ)ನ ಮಾರ್ಗಸೂಚಿಗಳಿಗೆ ತಿದ್ದುಪಡಿ ಮಾಡಲಾಗಿದೆ. ಇದರಿಂದ ಕೃಷಿ ಡ್ರೋನ್ ವೆಚ್ಚದ ಶೇ.100ವರೆಗೆ ಅಥವಾ 10 ಲಕ್ಷ ರೂ. ಇವೆರಡರಲ್ಲಿ ಯಾವುದು ಕಡಿಮೆಯೋ ಅದನ್ನು ಅನುದಾನವಾಗಿ ನೀಡಲು ನಿರ್ಧರಿಸಿದೆ.ಕೃಷಿ ಯಂತ್ರೋಪಕರಣಗಳ ತರಬೇತಿ ಮತ್ತು ಪರೀಕ್ಷಾ ಸಂಸ್ಥೆಗಳು, ಐಸಿಎಆರ್ ಸಂಸ್ಥೆಗಳು, ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ರಾಜ್ಯ ಕೃಷಿ ವಿಶ್ವವಿದ್ಯಾನಿಲಯಗಳಿಗೆ ನೀಡಲಾಗುತ್ತದೆ.
ಈ ಸಂಸ್ಥೆಗಳು ರೈತರ ಹೊಲಗಳಲ್ಲಿ ಡ್ರೋನ್ ತಂತ್ರಜ್ಞಾನದ ದೊಡ್ಡ ಪ್ರಮಾಣದ ಪ್ರಾತ್ಯಕ್ಷಿಕೆಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿದೆ.ರೈತ ಉತ್ಪಾದಕ ಸಂಸ್ಥೆಗಳು ಡ್ರೋನ್ ಖರೀದಿಗೆ ಶೇ.75 ವರೆಗೆ ಅನುದಾನ ಪಡೆಯಲು ಅರ್ಹವಾಗಿವೆ. ಡ್ರೋನ್‍ಗಳನ್ನು ಖರೀದಿಸಲು ಬಯಸದ ಕಸ್ಟಮ್ ಹೈರಿಂಗ್ ಕೇಂದ್ರಗಳು, ಹೈಟೆಕ್ ಹಬ್‍ಗಳು ಬಾಡಿಗೆಗೆ ಪಡೆಯಲು ಅವಕಾಶ ನೀಡಲಾಗಿದೆ. ಪ್ರತಿ ಹೆಕ್ಟೇರ್‍ಗೆ ಆರು ಸಾವಿರ ರೂ. ವೆಚ್ಚವನ್ನು ಒದಗಿಸಲಾಗುತ್ತದೆ. ಡ್ರೋನ್ ಹಣಕಾಸಿನ ನೆರವು ಮತ್ತು ಅನುದಾನ ಮುಂದಿನ ವರ್ಷದ ಮಾರ್ಚ್ 31ರವರೆಗೆ ಲಭ್ಯವಿರುತ್ತದೆ.
ಡ್ರೋನ್ ಅಪ್ಲಿಕೇಶನ್ ಮೂಲಕ ಎಲ್ಲ ರೀತಿಯ ಕೃಷಿ ಸೇವೆಗಳನ್ನು ಒದಗಿಸುವ ಸಲುವಾಗಿ ರೈತರ ಸಹಕಾರಿ ಸೊಸೈಟಿಗಳು, ಎಫ್ ಪಿಒಗಳು ಮತ್ತು ಗ್ರಾಮೀಣ ಉದ್ಯಮಿಗಳು ಈಗಾಗಲೇ ಸ್ಥಾಪಿಸಿರುವ ಗ್ರಾಹಕ ಬಾಡಿಗೆ ಕೇಂದ್ರಗಳು ಡ್ರೋನ್ ಖರೀದಿಸಲು ಮೂಲ ವೆಚ್ಚದ ಶೇ.40ರಷ್ಟು ಅಥವಾ 4 ಲಕ್ಷ ರೂ.ಗಳು ಇದರಲ್ಲಿ ಯಾವುದು ಕಡಿಮೆಯೋ ಅಷ್ಟು ಹಣಕಾಸಿನ ನೆರವು ಲಭ್ಯವಾಗುತ್ತದೆ.ಗ್ರಾಹಕರ ಬಾಡಿಗೆ ಕೇಂದ್ರಗಳನ್ನು ಸ್ಥಾಪಿಸುವ ಕೃಷಿ ಪದವೀಧರರು ಮೂಲ ವೆಚ್ಚದ ಶೇ.50 ಅಥವಾ ಡ್ರೋನ್ ಖರೀದಿಗೆ 5 ಲಕ್ಷ ರೂ. ವರೆಗೆ ಅನುದಾನ ಪಡೆಯಲು ಅರ್ಹರಾಗಿರುತ್ತಾರೆ. ಗ್ರಾಮೀಣ ಉದ್ಯಮಶೀಲರು ಮಾನ್ಯತೆ ಪಡೆದ ಪ್ರೌಢಶಿಕ್ಷಣ ಮಂಡಳಿಯಿಂದ 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಅಥವಾ ಯಾವುದೇ ಅಕೃತ ರಿಮೋಟ್ ಪೈಲಟ್ ತರಬೇತಿ ಸಂಸ್ಥೆ ನಿರ್ದಿಷ್ಟಪಡಿಸಿದ ಸಂಸ್ಥೆಯಿಂದ ರಿಮೋಟ್ ಪೈಲಟ್ ಪರವಾನಗಿ ಹೊಂದಿರಬೇಕು ಎಂದು ಸೂಚಿಸಲಾಗಿದೆ.
ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಷರತ್ತು ಬದ್ಧ ವಿನಾಯಿತಿ ಮಾರ್ಗಗಳಲ್ಲಿ ಡ್ರೋನ್ ಕಾರ್ಯಾಚರಣೆಗೆ ಅನುಮತಿ ನೀಡಿವೆ. ಭಾರತದಲ್ಲಿ ಡ್ರೋನ್ಗಳ ಬಳಕೆ ಮತ್ತು ಕಾರ್ಯಾಚರಣೆಯನ್ನು ನಿಯಂತ್ರಿಸಲು ನಾಗರಿಕ ವಿಮಾನಯಾನ ಸಚಿವಾಲಯ, 2021 ಆಗಸ್ಟ್ 25ರಂದು ಜಿಎಸ್‍ಆರ್ ಸಂಖ್ಯೆ 589(ಇ) ಮೂಲಕ ಡ್ರೋನ್ ನಿಯಮಾವಳಿ-2021 ಪ್ರಕಟಿಸಿದೆ.
ಕೃಷಿ, ಅರಣ್ಯ ಮತ್ತಿತರ ಪ್ರದೇಶಗಳಲ್ಲಿ ಬೆಳೆ ರಕ್ಷಣೆ, ಕೀಟನಾಶಕ ಸಿಂಪಡಣೆ, ಮಣ್ಣು ಮತ್ತು ಬೆಳೆ ಪೋಷಕಾಂಶಗಳ ಸಿಂಪಡಣೆಗಾಗಿ ಡ್ರೋನ್ ಬಳಕೆ ಮಾಡಬಹುದಾಗಿದೆ. ಡ್ರೋನ್ ಬಳಕೆ ಎಲ್ಲರಿಗೂ ಲಭ್ಯವಾಗುವಂತೆ ಮಾಡಿದರೆ ಕೃಷಿ ಚಟುವಟಿಕೆಗಳು ವೇಗ ಪಡೆದುಕೊಳ್ಳುತ್ತವೆ, ದೇಶಿಯ ಡ್ರೋನ್ ಉತ್ಪಾದನೆಯೂ ಹೆಚ್ಚಾಗಲಿದೆ ಎಂದು ಕೃಷಿ ಮಂತ್ರಾಲಯ ತಿಳಿಸಿದೆ.
ವರದಿ: ಆಂಟೋನಿ ಬೇಗೂರು